ಪಿಯು ಉಪನ್ಯಾಸಕರೊಂದಿಗೆ ಕಿಮ್ಮನೆ ನಡೆಸಿದ ಸಭೆ ವಿಫಲ, ನಾಳೆ ಸರ್ಕಾರದ ನಿಲುವು ಪ್ರಕಟ

ವೇತನ ತಾರತಮ್ಯ ವಿರೋಧಿಸಿ ದ್ವಿತೀಯ ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸಿ ಮುಷ್ಕರ ನಡೆಸುತ್ತಿರುವ ಉಪನ್ಯಾಸಕರೊಂದಿಗೆ ಪ್ರಾಥಮಿಕ...
ಕಿಮ್ಮನೆ ರತ್ನಾಕರ
ಕಿಮ್ಮನೆ ರತ್ನಾಕರ
ಬೆಂಗಳೂರು: ವೇತನ ತಾರತಮ್ಯ ವಿರೋಧಿಸಿ ದ್ವಿತೀಯ ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸಿ ಮುಷ್ಕರ ನಡೆಸುತ್ತಿರುವ ಉಪನ್ಯಾಸಕರೊಂದಿಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಗುರುವಾರ ನಡೆಸಿದ ಸಂಧಾನ ಸಭೆ ಮತ್ತೆ ವಿಫಲವಾಗಿದೆ.
ಇಂದು ಮಧ್ಯಾಹ್ನ ವಿಧಾನಸೌಧದ ಸಚಿವರ ಕಚೇರಿಯಲ್ಲಿ ಸಂಧಾನ ಸಭೆ ನಡೆಯಿತು. ಆದರೆ ಸಭೆ ವಿಫಲವಾಗಿದ್ದು, ನಾಳೆ 12 ಗಂಟೆಯೊಳಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿ, ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಕಿಮ್ಮನೆ ರತ್ನಾಕರ ಅವರು ತಿಳಿಸಿದ್ದಾರೆ.
ಈ ಮುಂಚೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವರ ನೇತೃತ್ವದಲ್ಲಿ ಪಿಯು ಉಪನ್ಯಾಸಕರ ಜೊತೆ ನಡೆಸಿದ ಸಂಧಾನ ಸಭೆಯೂ ವಿಫಲವಾಗಿತ್ತು. ಆ ಹಿನ್ನೆಲೆಯಲ್ಲಿ ಇಂದು ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ಅವರು ಮತ್ತೆ ಪಿಯು ಉಪನ್ಯಾಸಕರ ಜೊತೆ ಸಭೆ ನಡೆಸಿದರು.
ಮೊದಲು ನೀವು ಮೌಲ್ಯಮಾಪನ ಆರಂಭಿಸಿ, ನಿಗದಿತ ಸಮಯದಲ್ಲಿ ಫಲಿತಾಂಶ ಪ್ರಕಟವಾಗುವಂತೆ ನೋಡಿಕೊಳ್ಳಿ. ನಂತರ ನಿಮ್ಮೆಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಕಿಮ್ಮನೆ ಭರವಸೆ ನೀಡಿದರು. ಆದರೆ ಸಚಿವರ ಮಾತಿಗೆ ಉಪನ್ಯಾಸಕರು ಸಹಮತ ಸೂಚಿಸದೇ ಮೊದಲು ಕುಮಾರ್ ನಾಯಕ್ ವರದಿ ಜಾರಿ ಮಾಡಿ ಎಂದು ಆಗ್ರಹಿಸಿದರು.
ಏಪ್ರಿಲ್ 2ರಿಂದಲೇ ಪಿಯುಸಿ ಮೌಲ್ಯಮಾಪನ ಆರಂಭವಾಗಬೇಕಿತ್ತು. ಆದರೆ ಪಿಯು ಉಪನ್ಯಾಸಕರ ವೇತನ ಪರಿಷ್ಕರಣೆಗೆಂದು ರಚಿಸಿದ್ದ ಕುಮಾರ್ ನಾಯಕ್ ಅವರ ಸಮಿತಿ 2001ರಲ್ಲಿ ವರದಿ ಸಲ್ಲಿಸಿದರೂ ಸಹ ಸರ್ಕಾರ ಇದರ ಅನುಷ್ಠಾನಕ್ಕೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಪಿಯು ಉಪನ್ಯಾಸಕರು ಮೌಲ್ಯ ಮಾಪನ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಮಧ್ಯೆ, ಪಿಯು ಮೌಲ್ಯ ಮಾಪನ ಬಹಿಷ್ಕಾರ ಮುಂದುವರಿಯಲಿದೆ. ಯಾವುದೇ ಕಾರಣಕ್ಕೂ ಈ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದು ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com