
ಲಕನೌ: ಉತ್ತರಪ್ರದೇಶದ ಆಡಳಿತ ಸಮಾಜವಾದಿ ಪಕ್ಷದ ಸರ್ಕಾರವನ್ನು ಕಿತ್ತೊಗೆದು ಅಧಿಕಾರಕ್ಕೆ ಹಿಂದಿರುಗುವುದಾಗಿ ಪಣ ತೊಟ್ಟಿರುವ ಬಿ ಎಸ್ ಪಿ ಅಧ್ಯಕ್ಷೆ ಮಾಜಿ ಮುಖ್ಯಮಂತ್ರಿ ಮಾಯಾವತಿ, "ಭೂಗತ ದೊರೆಗಳ ಮತ್ತು ಗೂಂಡಾ ಸರ್ಕಾರವನ್ನು" ಕೊನೆಗಾಣಿಸಲಿದ್ದೇನೆ ಎಂದಿದ್ದಾರೆ.
ಡಾ| ಭೀಮರಾವ್ ಅಂಬೇಡ್ಕರ್ ಅವರ೧೨೫ನೇ ಜಯಂತಿಯಂದು ಪಕ್ಷದ ಕಾರ್ಯಕರ್ತರ ದೊಡ್ಡ ಸಭೆಯನ್ನುದ್ದೇಶಿಸಿ ಮಾತನಾಡಿದ ನಾಲ್ಕು ಅವಧಿಗಳ ಮಾಜಿ ಮುಖ್ಯಮಂತ್ರಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೇಲೂ ಚಾಟಿ ಬೀಸಿದ್ದಾರೆ.
ಎಲ್ಲ ಪಕ್ಷಗಳನ್ನು 'ಅವಕಾಶವಾದಿಗಳು' ಎಂದಿರುವ ಮಾಯಾವತಿ ರಾಜಕೀಯ ಮತ್ತು ಚುನಾವಣೆಯ ಲಾಭಕ್ಕಾಗೆ ಮಾತ್ರ ದಲಿತರನ್ನು ಓಲೈಸುತ್ತಾರೆ ಎಂದು ಆರೋಪಿಸಿದ್ದಾರೆ.
"ಉತ್ತರ ಪ್ರದೇಶದ ದಲಿತರಷ್ಟೇ ಅಲ್ಲ, ಇಡೀ ದೇಶದ ದಲಿತರು ಯಾವುದೇ ಬದ್ಧತೆ ಇಲ್ಲದೆ ರಾಜಕೀಯ ಲಾಭಕ್ಕಾಗಿ ಸಿಹಿ ಮಾತುಗಳನ್ನಾಡುವ ಈ ಪಕ್ಷಗಳ ಬಗ್ಗೆ ಎಚ್ಚರದಿಂದಿರಬೇಕು" ಎಂದು ಕೂಡ ಅವರು ಹೇಳಿದ್ದಾರೆ.
ಮುಂದಿನ ವರ್ಷದ ವಿಧಾನಸಭಾ ಚುನಾವಣೆಗಳಲ್ಲಿ 'ರಾಜಕೀಯ ಅಧಿಕಾರದ ಮಾಸ್ಟರ್'ಗಳಂತೆ ವರ್ತಿಸಿ ದಲಿತ ವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ಕರೆ ನೀಡಿದ್ದಾರೆ.
ಆನೆಯ ಪ್ರತಿಮೆಗಳನ್ನು ಸ್ಥಾಪಿಸಿದ್ದಕ್ಕೆ ಇತರ ಪಕ್ಷಗಳು ನನ್ನ ವಿರುದ್ಧ ಪಿತೂರಿ ಹೂಡಿದರು ಎಂದು ಹೇಳಿರುವ ಅವರು "ಅವರು ನಮ್ಮ ಪಕ್ಷದ ಪ್ರಚಾರಕ್ಕಾಗಿ ಇವುಗಳನ್ನು ನಿಲ್ಲಿಸಿದ್ದು ಎಂದಿದ್ದರು ಬದಲಾಗಿ ಅವುಗಳನ್ನು ಸ್ಥಾಪಿಸಿದ್ದು ಸ್ವಾಗತ ಚಿಹ್ನೆಯಾಗಿ" ಎಂದಿದ್ದಾರೆ ಮಾಯಾವತಿ.
Advertisement