ನಾಳೆಯಿಂದ ಪಿಯು ಮೌಲ್ಯಮಾಪನ ಆರಂಭ, ಮೇ ಮೊದಲ ವಾರದಲ್ಲಿ ಫಲಿತಾಂಶ: ಕಿಮ್ಮನೆ

ವೇತನ ತಾರತಮ್ಯ ನಿವಾರಣೆ ಹಾಗೂ ಕುಮಾರ್ ನಾಯಕ್ ವರದಿ ಜಾರಿಗೆ ಆಗ್ರಹಿಸಿ ಉಪನ್ಯಾಸಕರು ಪಿಯುಸಿ ಮೌಲ್ಯಮಾಪನ...
ಕಿಮ್ಮನೆ ರತ್ನಾಕರ
ಕಿಮ್ಮನೆ ರತ್ನಾಕರ
ಬೆಂಗಳೂರು: ವೇತನ ತಾರತಮ್ಯ ನಿವಾರಣೆ ಹಾಗೂ ಕುಮಾರ್ ನಾಯಕ್ ವರದಿ ಜಾರಿಗೆ ಆಗ್ರಹಿಸಿ ಉಪನ್ಯಾಸಕರು ಪಿಯುಸಿ ಮೌಲ್ಯಮಾಪನ ಬಹಿಷ್ಕರಿಸಿ ಕಳೆದ 12 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಮುಂದುವರೆದಿದೆ. ಆದರೆ ಬಹಿಷ್ಕಾರಕ್ಕೆ ಬಗ್ಗದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು, ನಾಳೆಯಿಂದ ಮೌಲ್ಯ ಮಾಪನ ಆರಂಭಿಸುವುದಾಗಿ ಗುರುವಾರ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರತ್ನಾಕರ, ನಾಳೆಯಿಂದ ಪಿಯುಸಿ ಮೌಲ್ಯ ಮಾಪನ ನಡೆಯಲಿದೆ. ಖಾಸಗಿ ಉಪನ್ಯಾಸಕರನ್ನು ಬಳಸಿ ಮೌಲ್ಯಮಾಪನ ನಡೆಸಲಾಗುತ್ತಿದೆ.ಎಪ್ರಿಲ್‌ 30 ರ ಒಳಗೆ ಮೌಲ್ಯ ಮಾಪನ ಪೂರ್ಣ ಗೊಳಿಸಿ, ಮೇ ಮೊದಲ ವಾರದಲ್ಲಿ ಫ‌ಲಿತಾಂಶ ಪ್ರಕಟ ಮಾಡುವುದಾಗಿ ಹೇಳಿದ್ದಾರೆ.
ಕಿಮ್ಮನೆ ರತ್ನಾಕರ ಅವರು ಪ್ರತಿಭಟನಾನಿರತ ಪದವಿ ಪೂರ್ವ ಕಾಲೇಜು ಉಪನ್ಯಾಸಕರೊಂದಿಗೆ ನಡೆಸಿದ ಸಾಲು ಸಾಲು ಸಂಧಾನ ಸಭೆಗಳು ವಿಫ‌ಲವಾಗಿದ್ದು, ದ್ವಿತೀಯ ಪಿಯುಸಿ ಮೌಲ್ಯಮಾಪನ ವಿಚಾರದಲ್ಲಿ ತಲೆದೋರಿರುವ ಸಮಸ್ಯೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ.
ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ 6.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೀವನದಲ್ಲಿ ಸರ್ಕಾರ ಮತ್ತು ಉಪನ್ಯಾಸಕರಿಬ್ಬರೂ ಚೆಲ್ಲಾಟ ಮುಂದುವರೆಸಿದ್ದಾರೆ. ಕಳೆದ 12 ದಿನಗಳಿಂದ ಉಪನ್ಯಾಸಕರ ಹೋರಾಟವನ್ನು ಹಗುರುವಾಗಿ ಪರಿಗಣಿಸುತ್ತಾ ಬಂದಿದ್ದ ಸರ್ಕಾರ ಬುಧವಾರ ಗಂಭೀರವಾಗಿ ಪರಿಗಣಿಸಿತ್ತಾದರೂ ಉಪನ್ಯಾಸಕರ ಬೇಡಿಕೆಗೆ ಬಗ್ಗದೆ ಚೌಕಾಶಿ ಮುಂದುವರೆಸಿದ್ದು ಸಂಧಾನ ವಿಫ‌ಲಗೊಳ್ಳಲು ಕಾರಣ.
ಬೇಡಿಕೆ ಈಡೇರಿಕೆಗಾಗಿ ಬುಧವಾರದಿಂದ ಪ್ರತಿಭಟನೆ ಬದಲು ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಪದವಿ ಪೂರ್ವ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಅಹೋರಾತ್ರಿ ಉಪವಾಸ ಮುಂದುವರೆಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com