ಉತ್ತರ ಪ್ರದೇಶದಲ್ಲಿ ಬಿಜೆಪಿಯಿಂದ ವಿವಾದಾತ್ಮಕ ಪೋಸ್ಟರ್
ವಾರಾಣಸಿ: ಉತ್ತರ ಪ್ರದೇಶದಲ್ಲಿ ಬಿಜೆಪಿ ಹಾಕಿರುವ ಪೊಸ್ಟರ್ ಹೊಸ ವಿವಾದವನ್ನು ಸೃಷ್ಟಿಸಿದೆ. ಉತ್ತರ ಪ್ರದೇಶವನ್ನು ದ್ರೌಪದಿಯಂತೆಯೂ, ವಿಪಕ್ಷ ನಾಯಕರು ದ್ರೌಪದಿ ಸೀರೆ ಎಳೆಯುವ ಕೌರವರಂತೆಯೂ, ಹಾಗೂ ಬಿಜೆಪಿ ಘಟಕದ ಅಧ್ಯಕ್ಷ ಕೇಶವ ಮೌರ್ಯ ಅವರನ್ನು ಶ್ರೀಕೃಷ್ಣನಂತೆ ಚಿತ್ರಿಸಿ ವಾರಣಾಸಿ ನಗರದ ಎಲ್ಲಾ ಗೋಡೆಗಳ ಮೇಲೆ ಪೊಸ್ಟರ್ ಅಂಟಿಸಲಾಗಿದೆ.
ದ್ರೌಪದಿಯ ಸೀರೆಯನ್ನು ಎಳೆಯುವ ಕೌರವರಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಬಹುಜನ್ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖೀಲೇಶ್ ಯಾದವ್, ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರನ್ನು ಪೋಸ್ಟರ್‌ನಲ್ಲಿ ಹಾಕಲಾಗಿದೆ.
ದ್ರೌಪದಿಯಾಗಿ ಬಿಂಬಿಸಿರುವ ಹೆಣ್ಣಿನ ಮುಖವನ್ನು ಪೋಸ್ಟರ್‌ನಲ್ಲಿ ಮಂಕಾಗಿ ಕಾಣಿಸಲಾಗಿದೆ. ಈ ವಿವಾದಾತ್ಮಕ ಪೋಸ್ಟರ್‌ಗೆ ಬಿಜೆಪಿ ಕಾರ್ಯಕರ್ತ ರೂಪೇಶ್ ಪಾಂಡೆ ಅವರ ಸಹಿ ಇದೆ.
ಕಲಿಯುಗ್ ಮೇ ಕೇಶವ್ ಕೇವಲ್ ಉಪದೇಶ್ ನಹೀಂ ದೇತೇ; ರಣಭೂಮೀ ಮೇ ಯುದ್ಧ್ ಕರ್ತೇಂ ಹೇಂ' (ಕಲಿಯುಗದಲ್ಲಿ ಶ್ರೀಕೃಷ್ಣನು ಕೇವಲ ಉಪದೇಶ ನೀಡುವುದಿಲ್ಲ; ರಣಭೂಮಿಯಲ್ಲಿ ಯುದ್ಧ ಕೂಡ ಮಾಡುತ್ತಾನೆ). ಎಂದು ಪೊಸ್ಟರ್ ಮೇಲೆ ದಪ್ಪ ತಲೆಬರಹ ಬರೆಯಲಾಗಿದೆ. ಜೊತೆಗೆ ಕೇಶವ ರಕ್ಷಮಾ ಎಂದು ಕೂಡ ಬರೆಯಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ