ಮೂಕ ಪ್ರೇಕ್ಷಕ ಪೊಲೀಸರೇ ಕೊಲ್ಲಂ ಪಟಾಕಿ ದುರಂತಕ್ಕೆ ಹೊಣೆ!

ಕೇರಳದ ಕೊಲ್ಲಂನ ಪುತ್ತಿಂಗಳ್ ದೇವಾಲಯದಲ್ಲಿ ಸಂಭವಿಸಿದ ಭೀಕರ ಪಟಾಕಿ ಅಗ್ನಿ ದುರಂತಕ್ಕೆ ಕೇರಳ ಪೊಲೀಸರ ನಿರ್ಲಕ್ಷ್ಯವೇ ಹೊಣೆ ಎಂದು ಕೇರಳದ ಗೃಹ ಇಲಾಖೆಯ ಉಪ ಕಾರ್ಯದರ್ಶಿ ನಳಿನಿ ನೆಟ್ಟೋ ಅವರು ವರದಿ ನೀಡಿದ್ದಾರೆ.
ಕೊಲ್ಲಂ ಅಗ್ನಿ ದುರಂತ ಸಂಬಂಧ ವರದಿ ನೀಡಿದ ನಳಿನಿ ನೆಟ್ಟೋ (ಸಂಗ್ರಹ ಚಿತ್ರ)
ಕೊಲ್ಲಂ ಅಗ್ನಿ ದುರಂತ ಸಂಬಂಧ ವರದಿ ನೀಡಿದ ನಳಿನಿ ನೆಟ್ಟೋ (ಸಂಗ್ರಹ ಚಿತ್ರ)
Updated on

ತಿರುವನಂತಪುರಂ: ಕೇರಳದ ಕೊಲ್ಲಂನ ಪುತ್ತಿಂಗಳ್ ದೇವಾಲಯದಲ್ಲಿ ಸಂಭವಿಸಿದ ಭೀಕರ ಪಟಾಕಿ ಅಗ್ನಿ ದುರಂತಕ್ಕೆ ಕೇರಳ ಪೊಲೀಸರ ನಿರ್ಲಕ್ಷ್ಯವೇ ಹೊಣೆ ಎಂದು ಕೇರಳದ ಗೃಹ  ಇಲಾಖೆಯ ಉಪ ಕಾರ್ಯದರ್ಶಿ ನಳಿನಿ ನೆಟ್ಟೋ ಅವರು ವರದಿ ನೀಡಿದ್ದಾರೆ.

ಕೇರಳ ಕೊಲ್ಲಂ ನ ಪುತ್ತಿಂಗಳ್ ದೇವಾಲಯದ ಆವರಣದಲ್ಲಿ ಆಯೋಜನೆಯಾಗಿದ್ದ ಪಟಾಕಿ ಸಿಡಿತ ಪ್ರದರ್ಶನ ವೇಳೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 114 ಮಂದಿ ಧಾರುಣವಾಗಿ  ಸಾವನ್ನಪ್ಪಿದ್ದರು. ಈ ದುರಂತ ಸಂಬಂಧ ವರದಿ ನೀಡುವಂತೆ ಕೇರಳ ಸರ್ಕಾರ ಗೃಹ ಇಲಾಖೆಯ ಉಪ ಕಾರ್ಯದರ್ಶಿ ನಳಿನಿ ನೆಟ್ಟೋ ಅವರಿಗೆ ಸೂಚಿಸಿತ್ತು. ಅದರಂತೆ ಶುಕ್ರವಾರ ಕೇರಳ  ಸರ್ಕಾರಕ್ಕೆ ವರದಿ ನೀಡಿರುವ ನಳಿನಿ ನೆಟ್ಟೋ ಅವರು, ದುರತಂಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ.

ನಳಿನಿ ನೆಟ್ಟೋ ಅವರು ನೀಡಿರುವ ವರದಿಯಲ್ಲಿ, ದುರಂತಕ್ಕೂ ಮೊದಲೇ ಅಂದರೆ ಪುತ್ತಿಂಗಳ್ ದೇವಾಲಯದ ಆವರಣದಲ್ಲಿ ಪಟಾಕಿ ಸಿಡಿಸುವ ಪ್ರದರ್ಶನ ಮತ್ತು ಪೈಪೋಟಿ ಎಲ್ಲೆ ಮೀರುತ್ತಿರುವ  ಕುರಿತು ಗುಪ್ತಚರ ಇಲಾಖೆಯ ಮೂಲಗಳು ತಿಳಿಸಿದ್ದವು. ಆದರೆ ಸ್ಥಳೀಯ ಪೊಲೀಸರು ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಲ್ಲದೆ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು ಎಂದು  ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಅಂತೆಯೇ ದುರಂತ ಸಂಬಂಧ ಪಟಾಕಿ ಪ್ರದರ್ಶನ ಕಾರ್ಯಕ್ರಮದ ಭದ್ರತಾ ಮೇಲುಸ್ತುವಾರಿ ಪೊಲೀಸರನ್ನು ಮತ್ತು ಕೊಲ್ಲಂ ಪೊಲೀಸ್ ಆಯುಕ್ತರನ್ನು, ಎಸಿಪಿ  ಚತಣ್ಣೂರ್ ಮತ್ತು ಪರವೂರ್ ಸರ್ಕಲ್ ಇನ್ಸ್ ಪೆಕ್ಟರ್ ಅವರನ್ನು ಕರ್ತವ್ಯ ಲೋಪದ ಮೇರೆಗೆ ಅಮಾನತುಗೊಳಿಸಬೇಕು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿದ್ದಾರೆ.

ನೆಟ್ಟೋ ವರದಿಯ ಪ್ರಮುಖಾಂಶಗಳು
1.ಸಂಭಾವ್ಯ ದುರಂತ ಸಂಬಂಧ ಕೇರಳ ಗುಪ್ತಚರ ಇಲಾಖೆ ಮೊದಲೇ ಕೊಲ್ಲಂ ಪೊಲೀಸರಿಗೆ ಮಾಹಿತಿ ನೀಡಿತ್ತು. ಆದರೆ ಗುಪ್ತಚರ ಇಲಾಖೆಯ ವರದಿಯನ್ನು ನಿರ್ಲಕ್ಷಿಸಿ ಪೊಲೀಸರು ಪಟಾಕಿ  ಪೈಪೋಟಿ ವೇಳೆ ಮೂಕ ಪ್ರೇಕ್ಷಕರಾದರು.

2.ಪಟಾಕಿ ಪ್ರದರ್ಶನ ನಡೆಸುವ ಕೊನೆ ಕ್ಷಣದಲ್ಲಿ ಪುತ್ತಿಂಗಳ್ ದೇಗುಲದ ಆಡಳಿತ ಮಂಡಳಿ ಅಪಘಾತ ವಿಮೆ ಮಾಡಿಸಿತ್ತು.

3.ಸಂಭಾವ್ಯ ದುರಂತದ ಕುರಿತು ಗುಪ್ತಚರ ಇಲಾಖೆಯ ಎಚ್ಚರಿಕೆ ಇದ್ದರೂ, ಸ್ಥಳೀಯ ಪೊಲೀಸರಾಗಲಿ ಅಥವಾ ದೇವಾಲಯದ ಆಡಳಿತ ಮಂಡಳಿಯಾಗಲೀ ಯಾವುದೇ ರೀತಿ ಸೂಕ್ತ ಭದ್ರತೆ  ವ್ಯವಸ್ಥೆ ಮಾಡಿಕೊಳ್ಳಲಿಲ್ಲ. ಪಟಾಕಿ ಪ್ರದರ್ಶನವ ಪೈಪೋಟಿಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡದಿದ್ದರೂ, ಅಲ್ಲಿ ಪ್ರದರ್ಶನ ನಡೆಸಲಾಗಿತ್ತು ಮತ್ತು ಇದಕ್ಕೆ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು.

4.ಯಾವಾಗ ಪಟಾಕಿ ಪ್ರದರ್ಶನಕ್ಕೆ ಜಿಲ್ಲಾಧಿಕಾರಿಗಳ ಅನುಮತಿ ದೊರೆಯಲಿಲ್ಲವೋ ಆಗ ದೇವಾಲಯದ ಆಡಳಿತ ಮಂಡಳಿ ಪೊಲೀಸ್ ಆಯುಕ್ತರ ಮೇಲೆ ಅನುಮತಿಗಾಗಿ ಒತ್ತಡ ಹೇರಿತ್ತು.

5.ಏಪ್ರಿಲ್ 9ರಂದು ದೇವಾಲದ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿದ್ದ ಪೊಲೀಸ್ ಆಯುಕ್ತರು ಪಟಾಕಿ ಪ್ರದರ್ಶನ ಅನುಮತಿಗಾಗಿ ಉಪ ಜಿಲ್ಲಾಧಿಕಾರಿಗಳನ್ನು ಭೇಟಿಯಾಗುವಂತೆ ಸಲಹೆ  ನೀಡಿದ್ದರು. ಅಲ್ಲದೆ ಪಟಾಕಿ ಪ್ರದರ್ಶನ ಪೈಪೋಟಿ ಇರುವುದಿಲ್ಲವೆಂದು ಆಶ್ವಾಸನೆ ನೀಡುವಂತೆ ಹೇಳಿದ್ದರು.

6.ಪಟಾಕಿ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ದೇವಾಲಯದ ಆಡಳಿತ ಮಂಡಳಿಯಿಂದ ಸ್ಥಳೀಯ ಸಿಐ ಅನುಮತಿ ಪತ್ರ ಕೇಳಿದ್ದರು. ಆದರೆ ದೇವಾಲಯದ ಆಡಳಿತ ಮಂಡಳಿ  ಸಿಬ್ಬಂದಿ ಅನುಮತಿ ಪತ್ರ ಬರುತ್ತಿದೆ ಎಂದು ಹೇಳಿದ್ದರು. ಇದನ್ನೇ ನಂಬಿದ ಸರ್ಕಲ್ ಇನ್ಸ್ ಪೆಕ್ಟರ್ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟರು. ಸಂವಹನ ಕ್ರಾಂತಿಯಾಗಿರುವ ಈ ಕಾಲದಲ್ಲಿ ಸ್ಥಳೀಯ  ಸರ್ಕಲ್ ಇನ್ಸ್ ಪೆಕ್ಟರ್ ಕೊಲ್ಲಂ ಕಮಿಷನರ್ ಕಚೇರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಪಟಾಕಿ ಪ್ರದರ್ಶನಕ್ಕೆ ಅನುಮತಿ ದೊರೆತಿದೆಯೇ ಇಲ್ಲವೇ ಎಂಬ ಕನಿಷ್ಚ ಮಾಹಿತಿಯನ್ನು ಕೂಡ  ಪಡೆದಿರಲಿಲ್ಲ.

7.ದುರಂತ ಸಂಬಂಧ ಪಟಾಕಿ ಪ್ರದರ್ಶನ ಕಾರ್ಯಕ್ರಮದ ಭದ್ರತಾ ಮೇಲುಸ್ತುವಾರಿ ಪೊಲೀಸರನ್ನು ಮತ್ತು ಕೊಲ್ಲಂ ಪೊಲೀಸ್ ಆಯುಕ್ತರನ್ನು, ಎಸಿಪಿ ಚತಣ್ಣೂರ್ ಮತ್ತು ಪರವೂರ್ ಸರ್ಕಲ್ ಇನ್ಸ್ ಪೆಕ್ಟರ್ ಅವರನ್ನು ಕರ್ತವ್ಯ ಲೋಪದ ಮೇರೆಗೆ ಅಮಾನತುಗೊಳಿಸಬೇಕು

ಒಟ್ಟಾರೆ ಕೊಲ್ಲಂ ಅಗ್ನಿ ದುರಂತ ಪ್ರಕರಣ ಸಂಬಂಧ ನಳಿನಿ ನೆಟ್ಟೋ ಅವರ ವರದಿ ಮತ್ತು ಶಿಫಾರಸ್ಸುಗಳು ಕೊಲ್ಲಂ ಪೊಲೀಸರು ನಿದ್ದೆಗೆಡುವಂತೆ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com