
ನವದೆಹಲಿ: ಉತ್ತರಾಖಂಡ್ ನಲ್ಲಿ ಕೇಂದ್ರ ಸರ್ಕಾರ ಹೇರಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಪಡಿಸಿ ಕಾಂಗ್ರಸ್ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸಲು ಅವಕಾಶ ನೀಡಿ ತೀರ್ಪು ಕೊಟ್ಟಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಪಟ್ಟಿ ಮಾಡಲು ಕೋರ್ಟ್ ನ ಪ್ರಧಾನ ಕಾರ್ಯದರ್ಶಿಯವರ ಬಳಿ ತೆರಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಮನವಿ ಸಲ್ಲಿಸಿದೆ ಎಂದು ಅಟಾರ್ನಿ ಜನರಲಿ ಮುಕುಲ್ ರೋಹತ್ಗಿ ತಿಳಿಸಿದಾಗ, ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಮತ್ತು ಎಸ್ ಕೆ ಸಿಂಗ್ ಒಳಗೊಂಡ ವಿಭಾಗೀಯ ಪೀಠ ಕೋರ್ಟ್ ಪ್ರಧಾನ ಕಾರ್ಯದರ್ಶಿಯವರ ಬಳಿ ತೆರಳಲು ಸೂಚಿಸಿದೆ.
ನಂತರ ಮುಖ್ಯ ನ್ಯಾಯಾಧೀಶ ಟಿ ಎಸ್ ಠಾಕೂರ್ ಈ ಅರ್ಜಿಯ ವಿಚಾರವನ್ನು ಯಾವ ಪೀಠ ಆಲಿಸಬೇಕೆಂದು ಸೂಚಿಸುತ್ತಾರೆ ಎಂದು ಕೋರ್ಟ್ ತಿಳಿಸಿದೆ.
ಇಂದು ಮಧ್ಯಾಹ್ನ ಅಥವಾ ಸೋಮವಾರ ಬೆಳಗ್ಗೆ ಈ ಅರ್ಜಿವ ವಿಚಾರಣೆ ನಡೆಯಲಿದೆ ಎಂದು ತಿಳಿಯಲಾಗಿದೆ.
ಬಿಜೆಪಿ ಮುಂದಾಳತ್ವದ ಕೇಂದ್ರ ಸರ್ಕಾರಕ್ಕೆ ಮುಖಭಂಗವಾದ ಸನ್ನಿವೇಶದಲ್ಲಿ ಗುರುವಾರ ಉತ್ತರಾಖಂಡ್ ಹೈಕೋರ್ಟ್ ಕೇಂದ್ರ ಸರ್ಕಾರ ಹೇರಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದುಪಡಿಸಿ, ಹರೀಶ್ ರಾವತ್ ಸರ್ಕಾರ ಮರುಕಳಿಸುವಂತೆ ಮಾಡಿತ್ತು. ಆ ಸರ್ಕಾರ ವಜಾಗೊಂಡು ಸುಮಾರು ಒಂದು ತಿಂಗಳಾಗಿತ್ತು.
Advertisement