ಬೇಲೂರು: ಹೊಯ್ಸಳರ ಕಾಲದ ಶಿಲ್ಪ ಕಲಾ ಶ್ರೀಮಂತಿಕೆಯ ಸಂಕೇತವಾದ ಬೇಲೂರಿ ಚೆನ್ನಕೇಶವ ದೇವಾಲಯವನ್ನು ಸ್ಫೋಟಿಸಲು ಪಾಕಿಸ್ತಾನದ ಉಗ್ರರು ಸಂಚು ರೂಪಿಸಿದ್ದಾರೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಪಾಕಿಸ್ತಾನದ ಉಗ್ರರ ಹಿಟ್ ಲಿಸ್ಟ್ ನಲ್ಲಿ 900 ವರ್ಷಗಳ ಇತಿಹಾಸ ಹೊಂದಿರುವ ಬೇಲೂರಿನ ಚನ್ನಕೇಶವ ದೇಗುಲ ಸೇರಿದ್ದು, ಭದ್ರತೆ ಬಿಗಿಗೊಳಿಸಿ ಎಂದು ಗುಪ್ತಚರ ಇಲಾಖೆ ದೇವಾಲಯದ ಆಡಳಿತ ಮಂಡಳಿಗೆ ಮೌಖಿಕ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
ಪಾಕಿಸ್ತಾನದ ಉಗ್ರರು ಭಾರತದ ವಿವಿಧ ದೇವಾಲಯ ಮತ್ತು ಪಾರಂಪರಿಕ ಕಟ್ಟಡಗಳನ್ನು ಸ್ಫೋಟಿಸಲು ಸಂಚು ರೂಪಿಸಿದ್ದಾರೆ. ಆ ಹಿಟ್ ಲಿಸ್ಟ್ ನಲ್ಲಿ ಬೇಲೂರಿನ ಚನ್ನಕೇಶವ ದೇವಾಲಯವು ಸೇರಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುಲ್ಲತಾ ಅವರಿಗೆ ಏಪ್ರಿಲ್ 21ರಂದು ಕರೆ ಮಾಡಿ ತಿಳಿಸಿದ್ದಾರೆ.
ಇನ್ನು ಈ ಸಂಬಂಧ ದೇವಾಲಯದ ಆಡಳಿತ ಮಂಡಳಿ ಹೆಚ್ಚಿನ ಭದ್ರತೆ ಕೇಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದಾರೆ.
ಈ ದೇವಸ್ಥಾನದಲ್ಲಿ ಅಲ್ಲಲ್ಲಿ ಮಾತ್ರ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಇದೆ. ಓರ್ವ ಪೇದೆ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸೇರಿದ 6 ಸಿಬ್ಬಂದಿ ಮಾತ್ರ ಇಲ್ಲಿ ಕೆಲಸ ಮಾಡುತ್ತಿದ್ದಾರೆ.