ಅಹಮದಾಬಾದ್: ಜುಲೈ 11ರಂದು ಗುಜಾರಾತಿನ ಉನಾದಲ್ಲಿ ನಡೆದ ದಲಿತ ದೌರ್ಜನ್ಯ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಲು ಬಹುಜನ ಸಮಾಜವಾದಿ ಪಕ್ಷದ ಅಧಿನಾಯಕಿ ಮಾಯಾವತಿ ಗುರುವಾರ ಗುಜರಾತ್ ಗೆ ಬಂದಿಳಿದಿದ್ದಾರೆ. ದಲಿತ ಸಮುದಾಯದ ಮೇಲಿನ ದೌರ್ಜನ್ಯಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಪ್ರಕರಣದಲ್ಲಿ ರಾಜ್ಯಕ್ಕೆ ಭೇಟಿನೀಡಿರುವ ರಾಷ್ಟ್ರ ರಾಜಕಾರಣಿಗಳಲ್ಲಿ ಮಾಯಾವತಿ ಕೊನೆಯವರಾಗಿದ್ದು "ನಾನು ಮೊದಲೇ ಇಲ್ಲಿಗೆ ಬರಲಿಲ್ಲ ಏಕೆಂದರೆ ಪರಿಸ್ಥಿತಿ ಹತೋಟಿಯಲ್ಲಿರಲಿಲ್ಲ ಮತ್ತು ಅದು ರಾಷ್ಟ್ರದಾದ್ಯಂತ ಗಲಭೆಗೆ ಎಡೆಮಾಡಿಕೊಡುವ ಸಾಧ್ಯತೆಯಿತ್ತು. ಈಗ ಪರಿಸ್ಥಿತಿ ತಿಳಿಗೊಂಡ ಮೇಲೆ ನಾನು ಬಂದಿದ್ದೇನೆ" ಎಂದು ಅವರು ಹೇಳಿದ್ದಾರೆ.
ಉತ್ತರಪ್ರದೇಶದ ಜನಪ್ರಿಯ ದಲಿತ ಮುಖಂಡೆ, ಶ್ರಮಿಕರು ಬಹಳವಾಗಿರುವ ಅಹಮದಾಬಾದ್ ನ ಸಾರಂಗ್ಪುರ್ ಗೆ ತೆರಳಿ ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಗೌರವ ಸಲ್ಲಿಸಿದ್ದಾರೆ. ಈ ದಿನದ ಕೊನೆಯಲ್ಲಿ ಮಾಯಾವತಿ ಸಂತ್ರಸ್ತರನ್ನು ಭೇಟಿ ಮಾಡಲಿದ್ದಾರೆ.
"ನಾವು ಸಂಸತ್ತಿನಲ್ಲಿ ಈ ವಿಷಯವಾಗಿ ಗದ್ದಲ ಎಬ್ಬಿಸಿದ ಮೇಲಷ್ಟೇ ಗುಜರಾತ್ ಸರ್ಕಾರ ಕ್ರಮ ಕೈಗೊಳ್ಳುವುದಕ್ಕೆ ಮುಂದಾಯಿತು ಎಂಬ ವಿಷಯ ಇನ್ನೂ ಆಘಾತಕಾರಿ. ರಾಜ್ಯದಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ಕೂಡ ಸುಮ್ಮನೆ ಕುಳಿತಿತ್ತು" ಎಂದು ಬಿ ಎಸ್ ಪಿ ಅಧ್ಯಕ್ಷೆ ಹೇಳಿದ್ದಾರೆ.