
ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ನಡೆ ಪಾಕಿಸ್ತಾನದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರಬಹುದು ಆದರೆ ಬಲೂಚಿಸ್ತಾನ ಹೋರಾಟಗಾರರಿಗೆ ದೊಡ್ಡ ಮುನ್ನಡೆಯಂತಾಗಿದ್ದು, ಇದೇ ಕಾರಣಕ್ಕೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಖಾಸಗಿ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಬಲೋಚ್ ಮಹಿಳಾ ಫೋರಂ ಸಂಸ್ಥೆಯ ಅಧ್ಯಕ್ಷೆ ನೇಲಾ ಖಾದ್ರಿ ಬಲೋಚ್ ಅವರು, "ಬಲೂಚಿಸ್ತಾನದ ಪ್ರಜೆಗಳಾದ ನಾವು ಮೊದಲಿಗೆ ಭಾರತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸುತ್ತೇವೆ. ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ನಮ್ಮ ಸಮಸ್ಯೆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ. ನರೇಂದ್ರ ಮೋದಿ ಅವರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ಬಲೂಚಿಸ್ತಾನ ವಿಚಾರದ ಬಗ್ಗೆ ಮಾತನಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿಚಾರವನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮುಟ್ಟಿಸಿದ್ದಾರೆ. ಇದೇ ನಮ್ಮ ಹೋರಾಟದ ಮೊದಲ ಗೆಲುವು" ಎಂದು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಆಡಳಿತದ ಕುರಿತು ಮಾತನಾಡಿದ ನೇಲಾ ಖಾದ್ರಿ ಬಲೋಚ್ ಅವರು, "ಬಲೂಚಿಸ್ತಾನ ಪ್ರಜೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಮೇಲೆ ಸಂಪೂರ್ಣ ವಿಶ್ವಾಸವಿದೆ. ಬಲೂಚಿಸ್ತಾನ ಪ್ರಜೆಗಳು ದುರಾಡಳಿತ ಮತ್ತು ಅರಾಜಕತೆಯಿಂದಾಗಿ ತೀವ್ರ ಬಳಲುತ್ತಿದ್ದಾರೆ. ಬಲೂಚಿಸ್ತಾನದ ಪ್ರಜೆಗಳು ಜಾತ್ಯಾತೀತರಾಗಿದ್ದು, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿದ್ದೇವೆ. ಭಾರತದೊಂದಿಗೆ ನಮ್ಮ ಸಾಮಾನ್ಯ ಆಸಕ್ತಿಗಳನ್ನು ಹಂಚಿಕೊಳ್ಳಲು ನಾವು ಇಚ್ಛಿಸುತ್ತೇವೆ. ನಮಗೆ ನಿಮ್ಮ ಮೇಲೆ ಸಂಪೂರ್ಣ ಭರವಸೆ ಇದೆ. ಇದೇ ಸೆಪ್ಟೆಂಬರ್ ನಲ್ಲಿ ನಡೆಯುವ ವಿಶ್ವಸಂಸ್ಥೆ ಕಲಾಪದಲ್ಲಿ ಬಲೂಚಿಸ್ತಾನ ವಿಚಾರವನ್ನು ನೀವು (ಭಾರತ) ಪ್ರಸ್ತಾಪಿಸುತ್ತೀರಿ ಎಂದು ಭಾವಿಸಿದ್ದೇನೆ. 1971ರಲ್ಲಿ ಬಾಂಗ್ಲಾದೇಶ ವಿಮೋಚನೆ ರೀತಿಯಲ್ಲಿಯೇ ಬಲೂಚಿಸ್ತಾನದ ದಶಕಗಳ ಸಮಸ್ಯೆಗೂ ಭಾರತ ಸರ್ಕಾರದಿಂದ ಉತ್ತರ ದೊರೆಯಬೇಕಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಇದೇ ವೇಳೆ ಬಲೂಚಿಸ್ತಾನದ ಮತ್ತೋರ್ವ ಹೋರಾಟಗಾರರಾದ ಹಮ್ಮಲ್ ಹೈದರ್ ಅವರು ಮಾತನಾಡಿ, ಪಾಕಿಸ್ತಾನದ ಸಿಂಧಿ ರಾಜಕೀಯ ಕಾರ್ಯಕರ್ತರನ್ನು ಅಮಾನುಷವಾಗಿ ಹತ್ಯೆಗೈದ ಕೊಲೆಗಡುಕರಿಂದ ಬಲೂಚಿಸ್ತಾನಕ್ಕೆ ಅಪಾಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉಗ್ರ ಬುರ್ಹಾನ್ ವನಿ ಎನ್ ಕೌಂಟರ್ ಬಳಿಕ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನಲೆಯಲ್ಲಿ ನಿನ್ನೆ ಸಂಸತ್ ಭವನದಲ್ಲಿ ನಡೆದ ಸರ್ವಪಕ್ಷಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಗಳಾದ ಬಲೂಚಿಸ್ತಾನ, ಗಿಲ್ಗಿಟ್ ಪ್ರದೇಶಗಳಲ್ಲಿನ ಪಾಕಿಸ್ತಾನದ ದುರಾಡಳಿತವನ್ನು ಮತ್ತು ಅಲ್ಲಿನ ಹಿಂಸಾಚಾರವನ್ನು ತೀವ್ರ ಖಂಡಿಸಿದ್ದರು. ಅಲ್ಲದೆ ತನ್ನ ಈ ಕೃತ್ಯಗಳಿಗೆ ಪಾಕಿಸ್ತಾನ ವಿಶ್ವ ಸಮುದಾಯದ ಮುಂದೆ ಉತ್ತರ ಹೇಳಲೇಬೇಕು ಎಂದು ಆಗ್ರಹಿಸಿದ್ದರು.
Advertisement