ಸ್ಕಾರ್ಪೀನ್: ಶಬ್ದ ಪ್ರಮಾಣ, ನೌಕೆಯ ವೇಗ ಸೇರಿದಂತೆ ನಿರ್ಬಂಧಿತ ಮಾಹಿತಿಗಳೇ ಸೋರಿಕೆ!

ನೌಕಪಡೆಯ ಭವಿಷ್ಯದ ಪ್ರಮುಖ ಅಸ್ತ್ರವೆಂದೇ ಬಣ್ಣಿಸಲಾಗುತ್ತಿದ್ದ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಯ ಪ್ರಮುಖ ಮಾಹಿತಿಗಳು ಸೋರಿಕೆಯಾಗಿದ್ದು, ಪ್ರಮುಖವಾಗಿ ನೌಕೆಯ ಶಬ್ದದ ಪ್ರಮಾಣ, ವೇಗ ಮತ್ತು ಶಸ್ತ್ರಾಸ್ತ್ರ ಸಾಮರ್ಥ್ಯಗಳಂತಹ ನಿರ್ಬಂಧಿತ ಮಾಹಿತಿಗಳೇ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ.
ಸ್ಕಾರ್ಪೀನ್ ಜಲಾಂತರ್ಗಾಮಿ (ಸಂಗ್ರಹ ಚಿತ್ರ)
ಸ್ಕಾರ್ಪೀನ್ ಜಲಾಂತರ್ಗಾಮಿ (ಸಂಗ್ರಹ ಚಿತ್ರ)

ನವದೆಹಲಿ: ನೌಕಾಪಡೆಯ ಭವಿಷ್ಯದ ಪ್ರಮುಖ ಅಸ್ತ್ರವೆಂದೇ ಬಣ್ಣಿಸಲಾಗುತ್ತಿದ್ದ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಯ ಪ್ರಮುಖ ಮಾಹಿತಿಗಳು ಸೋರಿಕೆಯಾಗಿದ್ದು, ಪ್ರಮುಖವಾಗಿ ನೌಕೆಯ ಶಬ್ದದ ಪ್ರಮಾಣ, ವೇಗ ಮತ್ತು ಶಸ್ತ್ರಾಸ್ತ್ರ ಸಾಮರ್ಥ್ಯಗಳಂತಹ ನಿರ್ಬಂಧಿತ ಮಾಹಿತಿಗಳೇ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಫ್ರಾನ್ಸ್ ಮೂಲದ ನೌಕಾ ತಯಾರಿಕಾ ಕಂಪನಿ ಡಿಸಿಎನ್‌ಎಸ್ ಸಂಸ್ಥೆ ಮೂಲಕವಾಗಿ ಮುಂಬೈನ ಡಾಕ್ ಯಾರ್ಡ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಸ್ಕಾರ್ಪೀನ್ ಜಲಾಂತರ್ಗಾಮಿಗೆ  ಸಂಬಂಧಿಸಿದ ಸುಮಾರು 22,400 ಪುಟಗಳಷ್ಟು ಸೂಕ್ಷ್ಮ ದಾಖಲೆಗಳು ಸೋರಿಕೆಯಾಗಿವೆ.

ಜಲಾಂತರ್ಗಾಮಿಗಳ ದಾಖಲೆ ಸೋರಿಕೆ ವಿಚಾರವನ್ನು ‘ದಿ ಆಸ್ಟ್ರೇಲಿಯನ್’ ಪತ್ರಿಕೆ ವರದಿ ಮಾಡಿದ್ದು, ನೌಕೆಗಳ ವೇಗ, ಅದರ ಶಬ್ದ ಮಾಡುವ ಪ್ರಮಾಣ, ಆವರ್ತನ ಪ್ರಮಾಣ ಮತ್ತಿತರ ಪ್ರಮುಖ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಸೋರಿಕೆಯಾಗಿದೆ ಎಂದು ಹೇಳಿದೆ. ಇದಲ್ಲದೆ ನೌಕೆಯಲ್ಲಿರುವ ಸಿಬ್ಬಂದಿ ಶತ್ರುಗಳ ಅರಿವಿಗೆ ಬಾರದಂತೆ ಸುರಕ್ಷಿತವಾಗಿ ಸಂವಹನ ನಡೆಸಬಲ್ಲ ವ್ಯವಸ್ಥೆ ಜಲಾಂತರ್ಗಾಮಿಯಲ್ಲಿದೆ ಎಂದು ಉಲ್ಲೇಖಗೊಂಡಿದ್ದ ಮಾಹಿತಿ, ಮ್ಯಾಗ್ನೆಟಿಕ್, ಎಲೆಕ್ಟ್ರೋಮ್ಯಾಗ್ನೆಟಿಕ್, ಇನ್‌ಫ್ರಾರೆಡ್ ವ್ಯವಸ್ಥೆ, ಕಾರ್ಯಾಚರಣೆ ಮತ್ತು ಯುದ್ಧ ವಿಧಾನಗಳಿಗೆ ಸಂಬಂಧಿಸಿದ ಮಾಹಿತಿಗಳು ಸೋರಿಕೆಯಾಗಿರುವುದಾಗಿ ಪತ್ರಿಕೆ ವರದಿ ಮಾಡಿದೆ.

ಸುಮಾರು 23.5 ಸಾವಿರ ಕೋಟಿ ರು. ವೆಚ್ಚದಲ್ಲಿ 6 ಸಬ್‌ಮೆರಿನ್‌ಗಳ ನಿರ್ಮಾಣ ಮಾಡಲಾಗುತ್ತಿದ್ದು, ಫ್ರಾನ್ಸ್‌ನ ನೌಕಾ ತಯಾರಿಕಾ ಕಂಪನಿ ಡಿಸಿಎನ್‌ಎಸ್ ನೇತೃತ್ವದಲ್ಲಿ ನೌಕೆ ನಿರ್ಮಾಣವಾಗುತ್ತಿದೆ. ಮುಂದಿನ ಅಕ್ಬೋಬರ್ ಅಥವಾ ನವೆಂಬರ್ ವೇಳೆ ಒಂದು ಜಲಾಂತರ್ಗಾಮಿ ನೌಕಾಪಡೆ ಸೇರಲಿದ್ದು, ಉಳಿದ ಐದು ನೌಕೆಗಳನ್ನು ಬಳಿಕದ ಪ್ರತೀ 9 ತಿಂಗಳಿಗೆ ಒಂದರಂತೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ವಿದೇಶದಲ್ಲೇ ಮಾಹಿತಿ ಸೋರಿಕೆ?
ಸಬ್‌ಮೆರಿನ್‌ಗಳ ರಹಸ್ಯ ಮಾಹಿತಿ ವಿದೇಶಗಳಲ್ಲೇ ಸೋರಿಕೆಯಾಗಿರುವ ಸಾಧ್ಯತೆ ಇದ್ದು, ಲಭ್ಯವಿರುವ ಮಾಹಿತಿಗಳ ಬಗ್ಗೆ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ನೌಕಾಪಡೆ ಹೇಳಿದೆ. ಈ ಕುರಿತು ತಜ್ಞರು ತನಿಖೆ ನಡೆಸಲಿದ್ದು, ನೌಕಾಪಡೆಯ ಮೂಲಗಳ ಪ್ರಕಾರ ಸಬ್‌ಮೆರಿನ್ ವಿನ್ಯಾಸಕ್ಕೆ ಸಂಬಂಧಿಸಿದಂತೆ ಯೋಜನೆಯ ಆರಂಭಿಕ ಹಂತದಲ್ಲಿದ್ದುದಕ್ಕಿಂತ ನಂತರ ನೌಕೆಯ ತಾಂತ್ರಿಕ ವಿಭಾಗದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಹೀಗಾಗಿ ಆರಂಭಿಕ ಹಂತದ ದಾಖಲೆ ಸೋರಿಕೆಯಾಗಿದೆಯೇ ಅಥವಾ  ನಂತರದ ಮಾಹಿತಿ ಬಯಲಾಗಿದೆಯೇ ಎಂಬ ಬಗ್ಗೆ ತಿಳಿಯಬೇಕಿದೆ ಎಂದು ನೌಕಾಪಡೆ ಮೂಲಗಳು ತಿಳಿಸಿವೆ.

ಪ್ರಸ್ತುತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ರಕ್ಷಣಾ ಇಲಾಖೆ ತನಿಖೆಗೆ ಆದೇಶಿಸಿದ್ದು, ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಸೇನಾಧಿಕಾರಿಗಳಿಂದ ವರದಿ ಕೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com