ನವದೆಹಲಿ: ಗೋವಾದ ಬಿಜೆಪಿ ಸರ್ಕಾರದ ವಿರುದ್ಧದ ನಡೆಯಿಂದ ಅಸಮಾಧಾನಗೊಂಡ ರಾಷ್ಟ್ರೀಯ ಸವಯಂಸೇವಕ ಸಂಘ (ಆರ್ ಎಸ್ ಎಸ್), ಬುಧವಾರ ಸಂಘಟನೆಯ ಗೋವಾ ಅಧ್ಯಕ್ಷ ಸುಭಾಷ್ ವೆಲಿಂಗ್ಕರ್ ಅವರನ್ನು ವಜಾಗೊಳಿಸಿದೆ.
"ರಾಜಕೀಯ ಸಂಘವನ್ನು ಟೀಕಿಸಿದ್ದಕ್ಕೆ ಮತ್ತು ಗೋವಾ ಸರ್ಕಾರದ ವಿರುದ್ಧ ನಡೆದುಕೊಂಡಿದ್ದಕ್ಕೆ ವೆಲಿಂಗ್ಕರ್ ಅವರನ್ನು ಕೂಡಲೇ ಅವರ ಸ್ಥಾನದಿಂದ ವಜಾ ಮಾಡಲಾಗಿದೆ" ಎಂದು ಆರ್ ಎಸ್ ಎಸ್ ಪ್ರಚಾರ ಅಧ್ಯಕ್ಷ ಮೋಹನ್ ವೈದ್ಯ ಹೇಳಿದ್ದಾರೆ.
ವೆಲಿಂಗ್ಕರ್ ಅವರು ಮುನ್ನಡೆಸುವ ಭಾರತೀಯ ಭಾಷಾ ಸುರಕ್ಷಾ ಮಂಚ್ (ಬಿಬಿಎಸ್ ಎಂ), ಗೋವಾ ಪ್ರಾಥಮಿಕ ಶಾಲೆಗಳಲ್ಲಿ ಪ್ರಾದೇಶಿಕ ಭಾಷೆಗಳಾದ ಕೊಂಕಣಿ ಮತ್ತು ಮರಾಠಿಯನ್ನು ಶೈಕ್ಷಣಿಕ ಮಾಧ್ಯಮವನ್ನಾಗಿಸಬೇಕು ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಸರ್ಕಾರ ಅನುದಾನ ನೀಡಬಾರದು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದರು.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ವೆಲಿಂಗ್ಕರ್ ವಿರುದ್ಧ ಆರ್ ಎಸ್ ಎಸ್ ನಾಯಕತ್ವಕ್ಕೆ ದೂರು ನೀಡಿದ ಮೇಲೆ ಅವರನ್ನು ಗೋವಾ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿಗೆ ಗೋವಾಗೆ ಭೇಟಿ ನೀಡಿದ್ದ ಅಮಿತ್ ಷಾ ಪಣಜಿಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲು ತೆರಳುವಾಗ ಅವರಿಗೆ ಬಿಬಿಎಸ್ ಎಂ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ್ದರು.
ಬಿಜೆಪಿ ಸರ್ಕಾರದ ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೆಕರ್ ಅವರ ವಿರುದ್ಧವೂ ಗುಡುಗಿದ್ದ ವೆಲಿಂಗ್ಕರ್ ಮತದಾರರ ನಂಬಿಕೆಗೆ ದ್ರೋಹ ಬಗೆಯುತ್ತಿರುವುದಾಗಿ ಹೇಳಿದ್ದರು. ಮುಂದಿನ ಬಾರಿ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಕ್ಷೀಣ ಎಂದು ಕೂಡ ಅವರು ಹೇಳಿದ್ದರು.
ಗೋವಾ ಚುನಾವಣೆಗಳಲ್ಲಿ ಈ ಬಾರಿ ಸ್ಪರ್ಧಿಸುತ್ತಿರುವ ಆಮ್ ಆದ್ಮಿ ಪಕ್ಷ ವೆಲಿಂಗ್ಕರ್ ಟೀಕೆಯನ್ನು ಪ್ರಚಾರದಲ್ಲಿ ಬಳಸಿಕೊಂಡಿತ್ತು.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೆಕರ್ ತಾವು ಕೂಡ ಸ್ವಯಂ ಸೇವಕರಾಗಿದ್ದು, ಆರ್ ಎಸ್ ಎಸ್ ಗೋವಾ ಮುಖ್ಯಸ್ಥನನ್ನು ಈ ರೀತಿ ವಜಾ ಮಾಡಿರುವದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.