
ನವದೆಹಲಿ: ಭಾರತೀಯ ಅಧಿಕಾರಿಗಳು ಅಭಿವೃದ್ಧಿ ತಡೆಯೊಡ್ಡುವಲ್ಲಿ ಪರಿಣಿತರು ಎಂದು ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ ಹೇಳಿದ್ದಾರೆ.
ಎರಡು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವ ಅಮೆರಿಕ ವಿದೇಶಾಂಗ ಸಚಿವ ಜಾನ್ ಕೆರ್ರಿ ಬುಧವಾರ ದೆಹಲಿಯ ಐಐಟಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಭಾರತೀಯ ಅಧಿಕಾರಿಗಳನ್ನು ಹಿನ್ನಲೆಯಾಗಿಟ್ಟುಕೊಂಡು ಮಾತನಾಡಿದ ಜಾನ್ ಕೆರ್ರಿ, ಭಾರತೀಯ ಅಧಿಕಾರಿಗಳನ್ನು ಯೋಜನೆಗಳಿಗೆ ತಡೆಯೊಡ್ಡುವ ಪರಿಣತರೆಂದು ವ್ಯಾಖ್ಯಾನಿಸುವ ಮೂಲಕ ಭಾರತದ ಆಡಳಿತ ವ್ಯವಸ್ಥೆಯ ಅವ್ಯವಸ್ಥೆಯನ್ನು ಸಾರ್ವಜನಿಕವಾಗಿಯೇ ಟೀಕಿಸಿದ್ದಾರೆ.
ಅಧಿಕಾರಿಶಾಹಿಯಲ್ಲಿನ ಕಾರ್ಯಕ್ಷಮತೆ, ಅಧಿಕಾರಿಗಳ ದಕ್ಷತೆಯ ಕೊರತೆಯ ಬಗ್ಗೆ ನೇರ ವಾಗ್ದಾಳಿ ನಡೆಸಿದ ಕೆರ್ರಿ, ಭಾರತೀಯ ಅಧಿಕಾರಿಗಳು ಯೋಜನೆಗಳಿಗೆ ತಡೆಯೊಡ್ಡುವುದರಲ್ಲಿ ಪರಿಣತರು ಎಂಬ ಅಪಖ್ಯಾತಿಯಿಂದ ಹೊರಬಂದರಷ್ಟೇ ಭಾರತ ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. " ಭಾರತ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವುದು ನಿಜವಾದರೂ, ಅದು ಎಷ್ಟು ವೇಗದಲ್ಲಿ ಸಾಗುತ್ತಿದೆ ಎಂಬ ಸಂಗತಿ ಮಹತ್ವದ್ದಾಗಿದೆ. ಹೊಸ ಬೃಹತ್ ಉದ್ಯಮಗಳು ಸ್ಥಾಪನೆಗೊಂಡು, ತ್ವರಿತವಾಗಿ ಅವು ಕಾರ್ಯಾರಂಭ ಮಾಡುವ ವಾತಾವರಣ ಸೃಷ್ಟಿಯಾಗಬೇಕು. ಆದರೆ ಭಾರತದ ಕಠಿಣ ಕಾನೂನು ಹಾಗೂ ಅಧಿಕಾರಶಾಹಿಯ ನೀತಿಯಿಂದಾಗಿ ವಿದೇಶಿ ಹೂಡಿಕೆ ಹಾಗೂ ಉದ್ದಿಮೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ದೆಹಲಿ ಮಳೆ ಹಾಗೂ ಟ್ರಾಫಿಕ್ ಜಾಮ್ ಕುರಿತು ವಿದ್ಯಾರ್ಥಿಗಳೊಂದಿಗೆ ಹಾಸ್ಯ ಚಟಾಕಿ ಹಾರಿಸಿದ ಕೆರ್ರಿ, ವಿದ್ಯಾರ್ಥಿಗಳನ್ನು ದೋಣಿಯಲ್ಲಿ ಬಂದಿರಾ ಎಂದು ಪ್ರಶ್ನಿಸಿದರು. ದೆಹಲಿಯಲ್ಲಿ ಬುಧವಾರ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಜಾನ್ ಕೆರ್ರಿಗೂ ಇದರ ಬಿಸಿ ತಟ್ಟಿತು. ಹೀಗಾಗಿ ಐಐಟಿ ಸಮಾರಂಭಕ್ಕೆ 1 ಗಂಟೆ ತಡವಾಗಿ ಕೆರ್ರಿ ಆಗಮಿಸಿದರು. ‘ನೀವು ದೋಣಿಯಲ್ಲಿ ಬಂದಿದ್ದೀರಾ? ಅಥವಾ ನೆಲ, ನೀರಿನಲ್ಲಿ ತೇಲುವ ವಾಹನದಲ್ಲಿ ಬಂದಿರಾ?’ ಎಂದು ಹಾಸ್ಯಚಟಾಕಿ ಹಾರಿಸಿದರು.
Advertisement