ರಾಜ್ಯಸಭಾ ಸದಸ್ಯರಿಗೆ 2014ರಲ್ಲಿ ಬಿಜೆಪಿ ಸೋತ ಲೋಕಸಭಾ ಕ್ಷೇತ್ರಗಳ ಜವಾಬ್ದಾರಿ

2019ರ ಲೋಕಸಭಾ ಚುನಾವಣೆ ಈಗಿನಿಂದಲೇ ಸಿದ್ಧತೆ ನಡೆಸಿರುವ ಆಡಳಿತಾರೂಢ ಬಿಜೆಪಿ 2014ರಲ್ಲಿ ತಾನು ಸೋತಿರುವ ಲೋಕಸಭಾ ಕ್ಷೇತ್ರಗಳನ್ನು ಶತಾಯಾಗತಾಯ ಗೆಲ್ಲಲೇಬೇಕು ಎನ್ನುವ ಕಾರಣಕ್ಕೆ ಹಾಲಿ ಬಿಜೆಪಿ ರಾಜ್ಯಸಭಾ ಸದಸ್ಯರಿಗೆ ಆ ಕ್ಷೇತ್ರಗಳ ಮೇಲುಸ್ತುವಾರಿ ವಹಿಸಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯಸಭಾ ಸದಸ್ಯರು (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯಸಭಾ ಸದಸ್ಯರು (ಸಂಗ್ರಹ ಚಿತ್ರ)

ನವದೆಹಲಿ: 2019ರ ಲೋಕಸಭಾ ಚುನಾವಣೆ ಈಗಿನಿಂದಲೇ ಸಿದ್ಧತೆ ನಡೆಸಿರುವ ಆಡಳಿತಾರೂಢ ಬಿಜೆಪಿ 2014ರಲ್ಲಿ ತಾನು ಸೋತಿರುವ ಲೋಕಸಭಾ ಕ್ಷೇತ್ರಗಳನ್ನು ಶತಾಯಾಗತಾಯ  ಗೆಲ್ಲಲೇಬೇಕು ಎನ್ನುವ ಕಾರಣಕ್ಕೆ ಹಾಲಿ ಬಿಜೆಪಿ ರಾಜ್ಯಸಭಾ ಸದಸ್ಯರಿಗೆ ಆ ಕ್ಷೇತ್ರಗಳ ಮೇಲುಸ್ತುವಾರಿ ವಹಿಸಿದೆ.

ಮೂಲಗಳ ಪ್ರಕಾರ ಬಿಜೆಪಿಯಿಂದ ಆರಿಸಿಬಂದಿರುವ ರಾಜ್ಯಸಭಾ ಸದಸ್ಯರಿಗೆ 2014ರಲ್ಲಿ ಪಕ್ಷ ಸೋತಂಥಹ ಕ್ಷೇತ್ರಗಳ ಮೇಲುಸ್ತುವಾರಿ ವಹಿಸುವಂತೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು  ಆದೇಶಿಸಿದ್ದು, ಅವರ ಸೂಚನೆಯಂತೆ ಪಕ್ಷ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯಸಭಾ ಸದಸ್ಯರಿಗೆ ಆ ಕ್ಷೇತ್ರಗಳ ಜವಾಬ್ದಾರಿ ನೀಡಿದ್ದಾರೆ. ಬಿಜೆಪಿಯ 52 ರಾಜ್ಯಸಭಾ ಸದಸ್ಯರಿಗೆ ಯಾವುದೇ  ನಿರ್ಧಿಷ್ಟ ಕ್ಷೇತ್ರವಿಲ್ಲ. ಹೀಗಾಗಿ ಅವರಿಗೆ 2014ರಲ್ಲಿ ಬಿಜೆಪಿ ಸೋತಿರುವಂತಹ ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದ್ದು, ಆ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸುವ ಜವಾಬ್ದಾರಿ ಈ ಸದಸ್ಯರ ಮೇಲಿದೆ.

ಇನ್ನು ಬಿಜೆಪಿಯ 52 ರಾಜ್ಯಸಭಾ ಸದಸ್ಯರ ಪೈಕಿ 12 ಮಂದಿ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಸಚಿವರೊಂದಿಗೆ ಸದಸ್ಯರು ಸಂಪರ್ಕ ಸಾಧಿಸುವ ಮೂಲಕ ಆಯಾ ಕ್ಷೇತ್ರಗಳ  ಅಭಿವೃದ್ಧಿ ಕೆಲಸದಲ್ಲಿ ತೊಡಗಬೇಕು. ಅಂತೆಯೇ ಸ್ಥಳೀಯ ಮುಖಂಡರೊಂದಿಗೆ ಚರ್ಚೆ ನಡೆಸಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಕ್ಷವನ್ನು ಬಲಪಡಿಸಬೇಕು. ಆ ಮೂಲಕ 2019ರ ಲೋಕಸಭಾ  ಚುನಾವಣೆಯಲ್ಲಿ ಆ ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಯಾಗಿದೆ.

ಪಕ್ಷದ ಈ ಯೋಜನೆಯಲ್ಲಿ ಯಶಸ್ಸು ಸಾಧಿಸುವ ರಾಜ್ಯಸಭಾ ಸದಸ್ಯರಿಗೆ 2019ರಲ್ಲೂ ಪಕ್ಷದ ವತಿಯಿಂದ ರಾಜ್ಯಸಭೆಗೆ ಆಯ್ಕೆ ಮಾಡುವುದಾಗಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ಪಕ್ಷದ  ಮೂಲಗಳು ತಿಳಿಸಿವೆ.

ಒಟ್ಟಾರೆ 2019ರ ಲೋಕಸಭಾ ಚುನಾವಣೆಗೆ ಇನ್ನೂ 2 ವರ್ಷಗಳು ಬಾರಿ ಇರುವಂತೆಯೇ ಬಿಜೆಪಿ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಪ್ರಸ್ತುತ ಬೆಜೆಪಿ 52 ರಾಜ್ಯಸಭಾ ಸದಸ್ಯರನ್ನು ಹೊಂದಿದ್ದು,  ಈ ಪೈಕಿ 12 ಮಂದಿ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com