ಜನ್ ಧನ್ ಖಾತೆಯಲ್ಲಿದೆ 1.64 ಕೋಟಿ ಅಘೋಷಿತ ಆದಾಯ; ತೆರಿಗೆ ಇಲಾಖೆಯಿಂದ ತನಿಖೆ!

ಕಪ್ಪುಹಣ ಚಲಾವಣೆ ಮೇಲೆ ಕಣ್ಣಿಟ್ಟಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜನ್ ಧನ್ ಖಾತೆಗಳ ಮೂಲಕ ಹರಿದಾಡಿರುವ ಸುಮಾರು 1.64 ಕೋಟಿ ಆಘೋಷಿತ ಆದಾಯವನ್ನು ಪತ್ತೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕಪ್ಪುಹಣ ಚಲಾವಣೆ ಮೇಲೆ ಕಣ್ಣಿಟ್ಟಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜನ್ ಧನ್ ಖಾತೆಗಳ ಮೂಲಕ ಹರಿದಾಡಿರುವ ಸುಮಾರು 1.64 ಕೋಟಿ ಆಘೋಷಿತ ಆದಾಯವನ್ನು ಪತ್ತೆ ಮಾಡಿದ್ದಾರೆ.

ನೋಟು ನಿಷೇಧ ಬಳಿಕ ಹಳೆಯ ನೋಟುಗಳನ್ನು ಬದಲಿಸಿಕೊಳ್ಳುವ ಅಂತಿಮ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಅತ್ತ ಕಾಳಧನಿಕರು ತಮ್ಮ ಬಳಿ ಇರುವ ಕಪ್ಪುಹಣವನ್ನು ಬದಲಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನಗಳು  ಮುಂದುವರೆದಿವೆ. ಮತ್ತೊಂದೆಡೆ ಜನ್ ಧಾನ್ ಖಾತೆಗಳ ಮೂಲಕ ಕಪ್ಪುಹಣವನ್ನು ಬಿಳಿಯಾಗಿಸುವ ಪ್ರಯತ್ನ ನಡೆದಿರುವಂತೆಯೇ ಜನ್ ಧನ್ ಖಾತೆಗಳಲ್ಲಿ ಭಾರಿ ಪ್ರಮಾಣದ ಆಘೋಷಿತ ಆದಾಯ ಪತ್ತೆಯಾಗಿದೆ ಎಂದು ತೆರಿಗೆ  ಅಧಿಕಾರಿಗಳು ಹೇಳಿದ್ದಾರೆ. ಸರ್ವರೂ ಬ್ಯಾಂಕ್ ಖಾತೆ ಹೊಂದಬೇಕು ಎಂಬ ಮಹದಾಸೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿ ಮಾಡಿದ ಜನ್ ಧನ್ ಖಾತೆಗಳಲ್ಲಿ ನೋಟು ನಿಷೇಧ ಬಳಿಕ ಸುಮಾರು 1.64 ಕೋಟಿ ರು  ಅಘೋಷಿತ ಆದಾಯ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ನೋಟು ನಿಷೇಧ ಬಳಿಕ ಜನ್ ಧನ್ ಖಾತೆಗಳಲ್ಲಿ ಕಪ್ಪು ಹಣ ಹರಿದಾಡುತ್ತಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದಂತೆಯೇ ಜನ್ ಧನ್ ಖಾತೆಗಳ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಅದರಂತೆ ಕೋಲ್ಕತಾ, ಮಿಡ್ನಾಪುರ,  ಬಿಹಾರದ ಅರಾ, ಕೇರಳದ ಕೊಚ್ಚಿ ಹಾಗೂ ಉತ್ತರ ಪ್ರದೇಶ ವಾರಣಾಸಿ ಜಿಲ್ಲೆಗಳಲ್ಲಿನ ಜನ್ ಧನ್ ಖಾತೆಗಳಲ್ಲಿ ಯಥೇಚ್ಛ ಪ್ರಮಾಣದಲ್ಲಿ ನಿಷೇಧಿತ ಹಳೆಯ ನೋಟುಗಳು ಹರಿದಾಡುತ್ತಿವೆ ಎಂಬುದನ್ನು ಪತ್ತೆ ಮಾಡಿದ್ದಾರೆ. ಅಂತೆಯೇ  50 ಸಾವಿರಕ್ಕೂ ಅಧಿಕ ಠೇವಣಿಯಾಗುವ ಖಾತೆಗಳನ್ನು ಗಮನಿಸಿ ಖಾತೆದಾರರ ವಹಿವಾಟಿನ ಆಧಾರ ಮೇಲೆ ಖಾತೆದಾರರಿಂದ ವಿವರ ಪಡೆಯುತ್ತಿದ್ದಾರೆ. ಇದೇ ರೀತಿ ಬಿಹಾರದಲ್ಲಿ ಇಂತಹುದೇ ಖಾತೆಯೊಂದರ ಮೇಲೆ ದಾಳಿ  ಮಾಡಿದ್ದ ಅಧಿಕಾರಿಗಳು ಸುಮಾರು 40 ಲಕ್ಷ ಅಘೋಷಿತ ಆದಾಯವನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ನೋಟುನಿಷೇಧವಾದ ನವೆಂಬರ್ 8ರಿಂದ ನವೆಂಬರ್ 23ರವೆರೆಗೂ ಜನ್ ಧನ್ ಖಾತೆಗಳಲ್ಲಿ 21 ಸಾವಿರ ಕೋಟಿ ಹಣ ಠೇವಣಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com