ಜಯಾ ಪಾರ್ಥಿವ ಶರೀರ ದಹನ ಮಾಡದೆ ದಫನ ಮಾಡಿದ್ದು ಯಾಕೆ ಗೊತ್ತಾ?

ತಮಿಳುನಾಡು ಮುಖ್ಯಮಂತ್ರಿ ಜಯರಾಮನ್ ಜಯಲಲಿತಾ ಅವರು ಬ್ರಾಹ್ಮಣ ಅಯ್ಯಂಗಾರ್ ಸಮುದಾಯಕ್ಕೆ ಸೇರಿದ್ದು, ದೇವರನ್ನು ನಂಬುವ,...
ಜಯಲಲಿತಾ ಪಾರ್ಥಿವ ಶರೀರ
ಜಯಲಲಿತಾ ಪಾರ್ಥಿವ ಶರೀರ
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯರಾಮನ್ ಜಯಲಲಿತಾ ಅವರು ಬ್ರಾಹ್ಮಣ ಅಯ್ಯಂಗಾರ್ ಸಮುದಾಯಕ್ಕೆ ಸೇರಿದ್ದು, ದೇವರನ್ನು ನಂಬುವ, ಹಣೆಯಲ್ಲಿ ಅಯ್ಯಂಗಾರ್ ನಾಮ ಧರಿಸುವ 'ಆಸ್ತಿಕ'ರಾಗಿದ್ದರು. ಆದರೂ ಅವರ ಪಾರ್ಥಿವ ಶರೀರವನ್ನು ಅಯ್ಯಂಗಾರ್ ಸಂಪ್ರದಾಯದಂತೆ ದಹನ ಮಾಡುವ ಬದಲು ದಫನ ಮಾಡಿದ್ದು ಏಕೆ ಗೊತ್ತಾ?
ತಮಿಳುನಾಡು ಸರ್ಕಾರ ಹಾಗೂ ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರ ನಿರ್ಧಾರದಂತೆ ಜಯಾ ಮೃತದೇಹವನ್ನು ದಹನದ ಬದಲು ದಫನ ಮಾಡಲಾಗಿದ್ದು, ಅಯ್ಯಂಗಾರ್ ಆಗಿರುವ ಜಯಾ ಮೃತದೇಹವನ್ನು ದಫನ ಮಾಡಲು ನಿರ್ಧರಿಸಿದ್ದು ಏಕೆ? ಎಂಬುದಕ್ಕೆ ಮುಖ್ಯಮಂತ್ರಿ ಅಂತ್ಯ ಸಂಸ್ಕಾರದ ಸಿದ್ಧತೆಯಲ್ಲಿ ಭಾಗಿಯಾಗಿದ್ದ ಸರ್ಕಾರದ ಹಿರಿಯ ಕಾರ್ಯದರ್ಶಿಯೊಬ್ಬರು ಉತ್ತರಿಸಿದ್ದಾರೆ.
"ಅಮ್ಮ ನಮ್ಮ ಪಾಲಿಗೆ ಅಯ್ಯಂಗಾರ್ ಆಗಿರಲಿಲ್ಲ. ಅವರು ಜಾತಿ, ಧರ್ಮಗಳಿಂದ ಅತೀತವಾಗಿ ಗುರುತಿಸಿಕೊಂಡವರು. ಪರಿಯಾರ್, ಅಣ್ಣಾ ದೊರೈ, ಎಂಜಿಆರ್ ಮೊದಲಾದ ದ್ರಾವಿಡ ನೇತಾರರಂತೆ ಜಯಾ ಅವರನ್ನೂ ದಫನ ಮಾಡಲಾಗಿದೆ. ಸಾವಿನ ನಂತರ ನಮ್ಮ ನಾಯಕಿಯ ದೇಹ ದಹನವಾಗುವ ಬದಲು ಅಲ್ಲೇ ಉಳಿಯಲಿ" ಎಂದು  ಪನ್ನೀರು ಪೂಸಿ ಮತ್ತು ಶ್ರೀಗಂಧದ ಪೆಟ್ಟಿಗೆಯಲ್ಲಿಟ್ಟು ದಫನ ಮಾಡಲಾಗಿದೆ ಎಂದಿದ್ದಾರೆ.
ಜಯಲಲಿತಾ ಅವರು ದೇವರನ್ನು ನಂಬುತ್ತಿದ್ದರು. ಹಾಗಾಗಿ ಅವರ ಪಾರ್ಥಿವ ಶರೀರವನ್ನು ದಹನ ಮಾಡಲಾಗುವುದು ಎಂದು ಜನರು ನಿರೀಕ್ಷಿಸುತ್ತಿದರು. ಆದರೆ ಚಿತೆಗೆ ಅಗ್ನಿ ಸ್ಪರ್ಶ ಮಾಡಲು ರಕ್ತ ಸಂಬಂಧಿಗಳು ಬೇಕು. ಜಯಾ ಅವರಿಗೆ ಇದ್ದ ಏಕೈಕ ರಕ್ತ ಸಂಬಂಧಿ ಎಂದರೆ ದೀಪಾ ಜಯಕುಮಾರ್ (ಜಯಲಲಿತಾ ಅವರ ಅಣ್ಣ ಜಯಕುಮಾರ್ ಪುತ್ರಿ). ಈ ರೀತಿಯ ವಿಧಿವಿಧಾನಗಳಿಗೆ ದೀಪಾ ಅವರಿಗೆ ಅವಕಾಶ ನೀಡಲು ಜಯಾ ಆಪ್ತ  ಗೆಳತಿ ಶಶಿಕಲಾ ಕುಟುಂಬ ಒಪ್ಪುವುದಿಲ್ಲ ಎಂದು ರಾಜಕೀಯ ವಿಶ್ಲೇಷಕರೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com