ಅಧಿಕಾರಿಗಳ ಮನೆ ಮೇಲೆ ಐಟಿ ದಾಳಿ: ಎಸ್ ಸಿ ಜಯಚಂದ್ರ ಸಿಬಿಐ ವಶಕ್ಕೆ

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ವೇಳೆ ನೂರಾರು ಕೋಟಿ ರುಪಾಯಿ ಆಸ್ತಿ ಪತ್ತೆಯಾಗಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದ...
ಐಟಿ ದಾಳಿ ವೇಳೆ ಪತ್ತೆಯಾದ ನಗದು - ಜಯಚಂದ್ರ
ಐಟಿ ದಾಳಿ ವೇಳೆ ಪತ್ತೆಯಾದ ನಗದು - ಜಯಚಂದ್ರ
ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ವೇಳೆ ನೂರಾರು ಕೋಟಿ ರುಪಾಯಿ ಆಸ್ತಿ ಪತ್ತೆಯಾಗಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದ ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮದ ಯೋಜನಾಧಿಕಾರಿ ಎಸ್‌.ಸಿ.ಜಯಚಂದ್ರ ಅವರನ್ನು ಶುಕ್ರವಾರ ಸಿಬಿಐ ವಶಕ್ಕೆ ನೀಡಲಾಗಿದೆ.
ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಜಯಚಂದ್ರ ಅವರನ್ನು ಸಿಬಿಐ ಅಧಿಕಾರಿಗಳು ಬಾಡಿ ವಾರಂಟ್ ಮೂಲಕ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಮಾಧ್ಯಮಗಳು ವರದಿಗಳು ಮಾಡಿವೆ.
ನಿನ್ನೆಯಷ್ಟೇ ಸಿಬಿಐ ವಿಶೇಷ ನ್ಯಾಯಾಲಯ ಜಯಚಂದ್ರ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. 5 ಲಕ್ಷ ರುಪಾಯಿ ಮೊತ್ತದ ಎರಡು ಬಾಂಡ್‌ ಮತ್ತು ಪಾಸ್‌ಪೋರ್ಟ್‌ ಅನ್ನು ನ್ಯಾಯಾಲಯದ ವಶಕ್ಕೆ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿತ್ತು. ಸ್ಥಳದಲ್ಲೇ ಪಾಸ್‌ಪೋರ್ಟ್‌ ಒಪ್ಪಿಸಲು ಜಯಚಂದ್ರ ಅವರಿಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ಒಂದು ದಿನದ ಮಟ್ಟಿಗೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ನ್ಯಾಯಾಂಗ ಬಂಧನದಲ್ಲಿದ್ದ ಜಯಚಂದ್ರ ಅವರನ್ನು ಸಿಬಿಐ ಪೊಲೀಸರು ಇಂದು ವಶಕ್ಕೆ ತೆಗೆದುಕೊಂಡಿದ್ದಾರೆ. ಕಪ್ಪುಹಣ ಬಿಳಿ ಮಾಡಿದ ಪ್ರಕರಣ ಮತ್ತು ಅಕ್ರಮ ಆಸ್ತಿ ಸಂಪಾದಿಸಿದ ಆರೋಪದಲ್ಲಿ ಜಯಚಂದ್ರ ವಿರುದ್ಧ ಸಿಬಿಐ ಮತ್ತು ಎಸಿಬಿ ಪ್ರತ್ಯೇಕವಾಗಿ ಎಫ್‌ಐಆರ್‌ ದಾಖಲಿಸಿವೆ. ಜಯಚಂದ್ರ ಜಾರಿ ನಿರ್ದೇಶನಾಲಯದ ವಶದಲ್ಲಿದ್ದ ಕಾರಣ ಸಿಬಿಐ ಪೊಲೀಸರು ಅವರನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ.
ಐಟಿ ದಾಳಿಯ ನಂತರ ರಾಜ್ಯ ಸರ್ಕಾರದ ಸೇವೆಯಿಂದ ಅಮಾನತುಗೊಂಡಿರುವ ಭ್ರಷ್ಟ ಅಧಿಕಾರಿಗಳಾದ ಟಿಎನ್ ಚಿಕ್ಕರಾಯಪ್ಪ ಹಾಗೂ ಎಸ್‌ಸಿ ಜಯಚಂದ್ರ ಅವರ ವಿರುದ್ಧ ಆದಾಯ ತೆರಿಗೆ ಇಲಾಖೆ, ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ಎಸಿಬಿ ತನಿಖೆ ನಡೆಸುತ್ತಿದ್ದು, ಜಾರಿ ನಿರ್ದೇಶನಾಲಯದ ವಿಚಾರಣೆ ನಂತರ ಈಗ ಸಿಬಿಐ ವಿಚಾರಣೆ ಎದುರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com