
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ 3ನೇ ಬಾರಿಗೆ ಅಧಿಕಾರ ವಹಿಸಿಕೊಂಡಿರುವ ಓ ಪನ್ನೀರ್ ಸೆಲ್ವಂ ಮೊತ್ತ ಮೊದಲ ಬಾರಿಗೆ ಪಕ್ಷದೊಳಗೆ ವಿರೋಧದ ಬಿಸಿ ಎದುರಿಸಿದ್ದಾರೆ.
ಎಐಎಡಿಎಂಕೆ ಸ್ಥಾಯಿ ಸಮತಿಗಳ ಅಧ್ಯಕ್ಷ ಇ ಮಧುಸೂದನ್ ಮತ್ತು ಕಂದಾಯ ಸಚಿವ ಎಂಬಿ ಉದಯ್ ಕುಮಾರ್ ಪನ್ನೀರ್ ಸೆಲ್ವಂ ನಾಯಕತ್ವದ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳುವುದರ ಜೊತೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂಬಂಧ ಪಕ್ಷದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಸಹಿ ಮಾಡಿ ಕೈಗೊಂಡಿರುವ ನಿರ್ಣಯವನ್ನು ಶಶಿಕಲಾ ಅವರಿಗೆ ನೀಡಿ ಸಿಎಂ ಆಗಿ ಅಧಿಕಾರ ಸ್ವೀಕರಿಸಬೇಕೆಂದು ಮನವಿ ಮಾಡಿದ್ದಾರೆ.
ಪುರುತ್ಚಿ ತಲೈವಿ ಟಾರಿಟಬಲ್ ಟ್ರಸ್ಟ್ ಹೆಸರಿನಲ್ಲಿ ಶಶಿಕಲಾ ಹಲವಾರು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿದ್ದಾರೆ. ತಮಿಳುನಾಡಿನ ಮುಖ್ಯಮಂತ್ರಿಯಾಗಿ ಶಶಿಕಲಾ ತಮ್ಮ ಜನ ಸೇವೆಯನ್ನು ಮುದುವರಿಸಬೇಕು ಎಂಬುದು ಎಐಎಡಿಎಂಕೆಯ ಒಂದೂವರೆ ಕೋಟಿ ಕಾರ್ಯಕರ್ತರ ಬಯಕೆಯಾಗಿದೆ ಎಂದು ಕಂದಾಯ ಸಚಿವ ಉದಯ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಾಜಿ ಸಿಎಂ ಜಯಲಲಿತಾ ಅವರು ಕೈಗೊಂಡಿದ್ದ ಸಮಾಜ ಕಲ್ಯಾಣ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವ ಸಾಮರ್ಥ್ಯ ಇರುವುದು ಶಶಿಕಲಾ ಅವರಿಗೆ ಮಾತ್ರ. ಹೀಗಾಗಿ ಆರ್ ಕೆ ನಗರ ವಿಧಾನಸಭೆ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಹಲವು ದಶಕಗಳಿಂದ ಜಯಲಲಿತಾ ಹಾಗೂ ಪಕ್ಷದ ಹಿತಾಸಕ್ತಿಗಾಗಿ ದುಡಿದಿರುವ ಶಶಿಕಲಾ ಅವರೇ ಸಿಎಂ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎಂದು ಸ್ಥಾಯಿ ಸಮಿತಿಗಳ ಅಧ್ಯಕ್ಷ ಮಧುಸೂದನ್ ಹೇಳಿದ್ದಾರೆ.
Advertisement