ನಿರ್ಭಯ್ ಕ್ಷಿಪಣಿ ಯೋಜನೆ ಸ್ಥಗಿತಗೊಳಿಸಲು ಮುಂದಾದ ಡಿಆರ್ ಡಿಒ?

ಸ್ವದೇಶಿ ನಿರ್ಮಿತ ಅಣ್ವಸ್ತ್ರ ಸಾಮರ್ಥ್ಯದ ಕ್ಷಿಪಣಿ ಎಂದೇ ಖ್ಯಾತಿಗಳಿಸಿದ್ದ ಬಹು ಉದ್ದೇಶಿತ ನಿರ್ಭಯ್ ಕ್ಷಿಪಣಿ ಯೋಜನೆಯನ್ನು ಡಿಆರ್ ಡಿಒ ಸ್ಥಗಿತಗೊಳಿಸಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಿರ್ಭಯ್ ಕ್ಷಿಪಣಿ (ಸಂಗ್ರಹ ಚಿತ್ರ)
ನಿರ್ಭಯ್ ಕ್ಷಿಪಣಿ (ಸಂಗ್ರಹ ಚಿತ್ರ)
Updated on

ನವದೆಹಲಿ: ಸ್ವದೇಶಿ ನಿರ್ಮಿತ ಅಣ್ವಸ್ತ್ರ ಸಾಮರ್ಥ್ಯದ ಕ್ಷಿಪಣಿ ಎಂದೇ ಖ್ಯಾತಿಗಳಿಸಿದ್ದ ಬಹು ಉದ್ದೇಶಿತ ನಿರ್ಭಯ್ ಕ್ಷಿಪಣಿ ಯೋಜನೆಯನ್ನು ಡಿಆರ್ ಡಿಒ ಸ್ಥಗಿತಗೊಳಿಸಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸೆಪ್ರೆಸ್ ಪತ್ರಿಕೆ ವರದಿ ಮಾಡಿರುವಂತೆ, ಉನ್ನತ ಮೂಲಗಳು ತಿಳಿಸಿರುವಂತೆ ನಿರ್ಭಯ್ ಕ್ಷಿಪಣಿ ಸತತ ವೈಫಲ್ಯ ಅನುಭವಿಸಿರುವುದಿಂದ ಈ ಕ್ಷಿಪಣಿ ಯೋಜನೆಯನ್ನು ಸ್ಥಗಿತಗೊಳಿಸಲು ರಕ್ಷಣಾ  ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ (ಡಿಆರ್‌ಡಿಒ) ಸಂಸ್ಥೆಯ ಮುಂದಾಗಿದೆ ಎಂದು ತಿಳಿದುಬಂದಿದೆ. ಯೋಜನೆ ಆರಂಭವಾಗಿ 12 ವರ್ಷಗಳೇ ಕಳೆದರೂ ಯೋಜನೆ ನಿರೀಕ್ಷಿತ ಫಲ ನೀಡಿಲ್ಲ. ನಿರ್ಭಯ್ ಕ್ಷಿಪಣಿ ಡಿಆರ್ ಡಿಒದ  ನಿರ್ಧಿಷ್ಠ ಗುರಿ ತಲುಪುವಲ್ಲಿ ವಿಫಲವಾಗಿದ್ದು, ಇದೇ ಕಾರಣಕ್ಕೆ ಯೋಜನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ನಿರ್ಭಯ್ ಕ್ಷಿಪಣಿ ದೇಶೀಯವಾಗಿ ನಿರ್ಮಿಸಿದ ಮೊದಲ ದೂರಗಾಮಿ ಖಂಡಾಂತರ ಕ್ಷಿಪಣಿಯಾಗಿದ್ದು, 2004ರಲ್ಲಿ ಸುಮಾರು 48 ಕೋಟಿ ರು.ಗಳ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಅಮೆರಿಕದ ಪ್ರಬಲ ಟೊಮ್ಹಾಕ್  ಕ್ಷಿಪಣಿಯೊಂದಿಗೆ ನಿರ್ಭಯ್ ಕ್ಷಿಪಣಿಯನ್ನು ಹೋಲಿಸಲಾಗುತ್ತಿದ್ದು, ಟೊಮ್ಹಾಕ್ ನಷ್ಟೇ ನಿರ್ಭಯ್ ಕೂಡ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತಿತ್ತು. ಬೆಂಗಳೂರು ಮೂಲದ ಏರೊನಾಟಿಕಲ್ ಡೆವಲಪ್ ಮೆಂಟ್ ಎಸ್ಟಾಬ್ಲಿಷ್ಮೆಂಟ್  (ಎಡಿಇ)ಸಂಸ್ಥೆ ನಿರ್ಭಯ್ ಕ್ಷಿಪಣಿಯ ವಿನ್ಯಾಸ ಮಾಡಿದ್ದು, 500 ಮೀಟರ್ ನಿಂದ ನಾಲ್ಕು ಕಿಮೀ ಎತ್ತರದಲ್ಲಿ ಹಾರಾಡುವ ಸಾಮರ್ಥ್ಯದ ಕ್ಷಿಪಣಿಗಾಗಿ ಯೋಜನೆ ರೂಪಿಸಲಾಗಿತ್ತು. ಡಿಸೆಂಬರ್ 31 2016ಕ್ಕೆ ಯೋಜನೆ  ಪೂರ್ಣಗೊಳ್ಳಬೇಕಿದ್ದು, ಆದರೆ ಈ ಹಿಂದೆ ನಡೆದ ಸತತ ನಾಲ್ಕು ಪರೀಕ್ಷೆಗಳಲ್ಲೂ ಕ್ಷಿಪಣಿ ವಿಫಲವಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ನಡೆದ ಸತತ ನಾಲ್ಕು ಪರೀಕ್ಷೆಗಳಲ್ಲಿ ಕ್ಷಿಪಣಿ ವಿಫಲವಾಗಿದ್ದು, ಇದೇ ಕಾರಣಕ್ಕೆ ನಿರ್ಭಯ್ ಕ್ಷಿಪಣಿ ಯೋಜನೆಯನ್ನು ಕೈ ಬಿಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. 2013ರಲ್ಲಿ ಕ್ಷಿಪಣಿಯನ್ನು ಮೊದಲ ಬಾರಿಗೆ  ಪರೀಕ್ಷಾರ್ಥ ಉಡಾವಣೆ ಮಾಡಲಾಗಿತ್ತು. ಯೋಜನೆ ಆರಂಭವಾಗಿ ಸತತ 12 ವರ್ಷಗಳೇ ಕಳೆದರೂ ಕ್ಷಿಪಣಿಯಲ್ಲಿನ ತಾಂತ್ರಿಕ ದೋಷವನ್ನು ಸರಿಪಡಿಸುವಲ್ಲಿ ವಿಜ್ಞಾನಿಗಳು ಸತತವಾಗಿ ವಿಫಲರಾಗುತ್ತಿದ್ದಾರೆ. ಇನ್ನು ರಾಕೆಟ್  ನಿಯಂತ್ರಕ ವ್ಯವಸ್ಥೆಯಲ್ಲಿನ ವಿಜ್ಞಾನಿಗಳು, ಸಂಚರಣಾ ವ್ಯವಸ್ಥೆಯ ವಿಜ್ಞಾನಿಗಳು ಸೇರಿದಂತೆ ಯೋಜನೆಯ ವಿವಿಧ ವಿಜ್ಞಾನಿಗಳು ಕ್ಷಿಪಣಿ ಯೋಜನೆಯ ವೈಫಲ್ಯಕ್ಕೆ ರಾಕೆಟ್ ನ ಯಂತ್ರಾಂಶದತ್ತ ಬೆರಳು ತೋರಿಸುತ್ತಿದ್ದು,  ಯಂತ್ರಾಂಶದಲ್ಲಿನ ತೊಂದರೆಯಿಂದಾಗಿ ಕ್ಷಿಪಣಿ ವಿಫಲಾವಾಗುತ್ತಿದೆ ಎಂದು ಹೇಳುತ್ತಿದ್ದಾರೆ.

ಆದರೆ ವಿಜ್ಞಾನಿಗಳ ಆರೋಪವನ್ನು ನಿರಾಕರಿಸಿರುವ ಯಂತ್ರಾಂಶ ಸಿದ್ಧಪಿಡಿಸಿರುವ ಎಡಿಇ ಸಂಸ್ಥೆ ಯಂತ್ರಾಂಶ ನೀಡಿದ ಆರ್ ಸಿಐನತ್ತ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಯಂತ್ರಾಂಶದ ವೈಫಲ್ಯವೋ ಅಥವಾ ತಂತ್ರಾಂಶಗ  ವೈಫಲ್ಯವೋ ಒಟ್ಟಾರೆ ನಿರ್ಭಯ್ ಕ್ಷಿಪಣಿ ತನ್ನ ನಾಲ್ಕನೇ ಪರೀಕ್ಷಾರ್ಥ ಉಡಾವಣೆಯಲ್ಲೂ ವಿಫಲವಾಗಿದ್ದು ಇದು ಇಡೀ ಯೋಜನೆ ಮೇಲೆ ಕರಿ ನೆರಳು ಬೀರುವಂತೆ ಮಾಡಿದೆ.

ಯೋಜನೆ ಆರಂಭವಾಗಿದ್ದಾಗಲೇ ಹುಟ್ಟಿತ್ತು ವಿವಾದ
ಇನ್ನು ನಿರ್ಭಯ್ ಕ್ಷಿಪಣಿ ಯೋಜನೆ ಆರಂಭವಾದಾಗಲೇ ವಿವಾದಗಳು ಹುಟ್ಟಿಕೊಂಡಿದ್ದವು. ನಿರ್ಭಯ್ ಕ್ಷಿಪಣಿ 0.8 ಮ್ಯಾಕ್ ವೇಗದಲ್ಲಿ ಚಲಿಸುತ್ತದೆ. ಆದರೆ ಈ ಯೋಜನೆ ಆರಂಭವಾಗುವ ಹೊತ್ತಿಗೇ ಇಂಡೋ-ರಷ್ಯಾ ಸಹಭಾಗಿತ್ವದಲ್ಲಿ  ನಿರ್ಭಯ್ ಗಿಂತಲೂ ಅತೀ ಹೆಚ್ಚು ವೇಗವಾಗಿ ಅಂದರೆ 3 ಮ್ಯಾಕ್ ವೇಗದಲ್ಲಿ ಚಲಿಸುವ ಬ್ರಹ್ಮೋಸ್ ಕ್ಷಿಪಣಿ ಯೋಜನೆ ಅಸ್ತಿತ್ವದಲ್ಲಿತ್ತು. ಹೀಗಾಗಿ ಹಲವು ವಿಜ್ಞಾನಿಗಳು ಈ ನಿರ್ಭಯ್ ಕ್ಷಿಪಣಿಯ ಪ್ರಸ್ತುತತೆಯನ್ನೇ ಪ್ರಶ್ನಿಸಿದ್ದರು.  ಯೋಜನೆ ಆರಂಭವಾದಾಗಿನಿಂದ ಈ ವರೆಗೂ ಡಿಆರ್ ಡಿಒ ಈ ನಿರ್ಭಯ್ ಕ್ಷಿಪಣಿಗಾಗಿ ಸುಮಾರು 100 ಕೋಟಿಗೂ ಅಧಿಕ ಹಣ ವ್ಯಯಿಸಿದ್ದು, ಪ್ರತೀ ಒಂದು ಕ್ಷಿಪಣಿ ಪರೀಕ್ಷೆಗೆ ಸುಮಾರು 10 ಕೋಟಿ ರು. ವೆಚ್ಚವಾಗುತ್ತಿದೆ. ಅಲ್ಲದೆ ಈ  ಯೋಜನೆಯಲ್ಲಿ ಪಾಲ್ಗೊಂಡಿರುವ ವಿವಿಧ ವಿಜ್ಞಾನಿಗಳ ತಂಡದಲ್ಲಿಯೇ ಯೋಜನೆ ಕುರಿತಂತೆ ಒಮ್ಮತವಿಲ್ಲ. ಹೀಗಾಗಿ ಈ ಯೋಜನೆಯನ್ನೇ ಸ್ಥಗಿತಗೊಳಿಸಲು ಡಿಆರ್ ಡಿಒ ಮುಂದಾಗಿದೆ.

ಆದರೆ ಈ ಬಗ್ಗೆ ಡಿಆರ್ ಡಿಒ ಅಧಿಕಾರಿಗಳನ್ನು ಪ್ರಶ್ನಿಸಿದರೆ ಯಾವೊಬ್ಬ ಅಧಿಕಾರಿಯೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಡಿಆರ್ ಡಿಒದ ಮುಖ್ಯಸ್ಥ ಸೆಲ್ವಿನ್ ಕ್ರಿಸ್ಟೋಫರ್ ಹಾಗೂ ನಿರ್ಭಯ್ ಕ್ಷಿಪಣಿ ಯೋಜನೆಯ ನಿರ್ದೇಶಕ ವಸಂತ್  ಶಾಸ್ತ್ರಿ ಅವರೂ ಕೂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಾರೆ ವಿವಿಧ ಉದ್ದೇಶಗಳ ಹಿನ್ನಲೆಯಲ್ಲಿ ಆರಂಭಗೊಂಡ ಮಹತ್ವಾಕಾಂಕ್ಷಿ ಯೊಜನೆಯೊಂದು ಇದೀಗ ಸ್ಥಗಿತಗೊಳ್ಳುವ ಆತಂಕದಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com