ಚೆಕ್ ಬೌನ್ಸ್ ಕಾನೂನು ಇನ್ನಷ್ಟು ಕಠಿಣ; ಜಾಮೀನು ರಹಿತ ಅಪರಾಧ ಪಟ್ಟಿಗೆ ಸೇರ್ಪಡೆ?

ಚೆಕ್ ಬೌನ್ಸ್ ಪ್ರಕರಣಗಳ ಇತ್ಯರ್ಥ ಕುರಿತಂತೆ ನ್ಯಾಯಾಲಯಗಳ ಮೇಲಿನ ಹೊರೆ ತಗ್ಗಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಚೆಕ್ ಬೌನ್ಸ್ ಕಾನೂನನ್ನು ಮತ್ತಷ್ಟು ಕಠಿಣಗೊಳಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಚೆಕ್ ಬೌನ್ಸ್ ಪ್ರಕರಣಗಳ ಇತ್ಯರ್ಥ ಕುರಿತಂತೆ ನ್ಯಾಯಾಲಯಗಳ ಮೇಲಿನ ಹೊರೆ ತಗ್ಗಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಚೆಕ್ ಬೌನ್ಸ್ ಕಾನೂನನ್ನು ಮತ್ತಷ್ಟು ಕಠಿಣಗೊಳಿಸುವ ಕುರಿತು ಕೇಂದ್ರ ಸರ್ಕಾರ ಚಿಂತನೆ  ನಡೆಸಿದೆ.

ನೋಟು ನಿಷೇಧಗೊಳಿಸುವ ಮೂಲಕ ನಗದು ರಹಿತ ವಹಿವಾಟಿಗೆ ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ ಇದೀಗ ಚೆಕ್ ಬೌನ್ಸ್ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಲು ಮುಂದಾಗಿದ್ದು, ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.  ಚೆಕ್ ಬೌನ್ಸ್ ಪ್ರಕರಣಗಳನ್ನು ಇನ್ನು ಮುಂದೆ ಜಾಮೀನು ರಹಿತ ಅಪರಾಧಗಳ ಪಟ್ಟಿಗೆ ತರುವ ಮೂಲಕ ಚೆಕ್ ಬೌನ್ಸ್ ಪ್ರಕರಣಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ  ದೇಶಾದ್ಯಂತ ವಿವಿಧ ಪ್ರಕರಣಗಳಲ್ಲಿ ಸುಮಾರು 18.3 ಲಕ್ಷ ಚೆಕ್ ಬೌನ್ಸ್ ಪ್ರಕರಣಗಳ ವಿಚಾರಣೆ ಬಾಕಿ ಇದ್ದು, ನ್ಯಾಯಾಲಯದ ಸಮಯ ಈ ಪ್ರಕರಣಗಳ ವಿಚಾರಣೆಯಲ್ಲೇ ವ್ಯರ್ಥವಾಗುತ್ತಿದೆ. ಹೀಗಾಗಿ ಚೆಕ್ ಬೌನ್ಸ್ ಪ್ರಕರಣಗಳನ್ನು  ನಿಯಂತ್ರಣಕ್ಕೆ ಕಠಿಣ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.

ಇನ್ನು 2014ರಲ್ಲೇ ಸುಪ್ರೀಂಕೋರ್ಟ್ ಚೆಕ್ ಬೌನ್ಸ್ ಪ್ರಕರಣ ಯಾವ ವ್ಯಾಪ್ತಿಯಲ್ಲಿ ನಡೆದಿದೆಯೋ ಅಲ್ಲೇ ಪ್ರಕರಣದ ವಿಚಾರಣೆ ನಡೆಯಬೇಕು ಎಂದು ತೀರ್ಪು ನೀಡಿತ್ತು. ಹೀಗಿದ್ದೂ ಚೆಕ್ ಬೌನ್ಸ್ ಪ್ರಕರಣ ತ್ವರಿತ ವಿಲೇವಾರಿ  ತಡವಾಗುತ್ತಿದೆ. ಹೀಗಾಗಿ ದಿನೇ ದಿನೇ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ನ್ಯಾಯಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಬಜೆಟ್‌‌ ಗೆ ಪೂರ್ವಭಾವಿಯಾಗಿ ನಡೆದಿರುವ ತಯಾರಿ ನಡುವೆ ವರ್ತಕರ ಸಂಸ್ಥೆಗಳ ನಿಯೋಗವೊಂದು ಹಣಕಾಸು ಸಚಿವಾಲಯದ ಮುಖ್ಯಸ್ಥರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಇಂತಹವೊಂದು ಸಲಹೆ ಕೇಳಿ  ಬಂದಿದ್ದು, ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಮೂಲಗಳು ತಿಳಿಸಿವೆ. ನೋಟು ನಿಷೇಧ ಬಳಿಕ ತಮ್ಮ ವ್ಯಾಪಾರ ವಹಿವಾಟು ಸುಸೂತ್ರವಾಗಿ ನಡೆಯಲು ಇಂತಹ ಕ್ರಮ ಅಗತ್ಯ ಎಂದು ನಿಯೋಗ ಸರ್ಕಾರವನ್ನು  ಒತ್ತಾಯಿಸಿದೆ ಎಂದು ತಿಳಿದುಬಂದಿದೆ.

ಚೆಕ್ ಬೌನ್ಸ್ ನಂತಹ ಭೀತಿಯಿಂದಾಗಿ ಗ್ರಾಹಕರಿಂದ ಚೆಕ್‌ಗಳನ್ನು ಸ್ವೀಕರಿಸಲು ವರ್ತಕರರು ಹಿಂಜರಿಯುತ್ತಿದ್ದಾರೆ. ಹೀಗಾಗಿ ಒಂದು ವೇಳೆ ತಾವು ಪಡೆದ ಚೆಕ್‌ಗಳು ಬೌನ್ಸ್ ಆದರೆ ಅಂತಹವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬುದು  ನಿಯೋಗದ ಮನವಿ. ನಗದು ಬಿಕ್ಕಟ್ಟು ಮುಂದುವರೆದಿರುವ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಹೆಚ್ಚುವರಿ ಖಾತರಿಗಳನ್ನಾಧರಿಸಿ ಬ್ಯಾಂಕ್ ಚೆಕ್‌ಗಳನ್ನು ಪಡೆಯಲು ಆಸಕ್ತಿ ತೋರುತ್ತಿದ್ದಾರೆ. ಚೆಕ್‌ಬೌನ್ಸ್ ಆದ ತಿಂಗಳೊಳಗೆ ಚೆಕ್ ನೀಡಿದ  ಗ್ರಾಹಕನಿಗೆ ಶಿಕ್ಷೆಯಾಗಬೇಕು ಎಂಬುದು ನಿಯೋಗದ ಸಲಹೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರ ನಿರ್ದಿಷ್ಟ ಸಲಹೆಗಳನ್ನು ಒಪ್ಪಿದೆಯೇ ಇಲ್ಲವೆ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ, ಚೆಕ್‌ಬೌನ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಪರಿಶೀಲಿಸುತ್ತಿದೆ ಎಂದು ತಿಳಿದುಬಂದಿದೆ. ಈ  ಸಂಬಂಧ ಮಸೂದೆಯೊಂದನ್ನು ಸಂಸತ್‌ ನ ಬಜೆಟ್‌ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದ್ದು, ಉತ್ತರ ಪ್ರದೇಶ ಮತ್ತು ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ  ವ್ಯಾಪಾರಿಗಳನ್ನು ಓಲೈಸಲು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಆಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com