ನನ್ನ ಜನ್ ಧನ್ ಖಾತೆಯಲ್ಲಿ 100 ಕೋಟಿ ರೂ. ಹಣ: ಗಾಬರಿಯಾದ ಮಹಿಳೆಯಿಂದ ಪ್ರಧಾನಿಗೆ ಪತ್ರ!

ತನ್ನ ಜನ್ ಧನ್ ಖಾತೆಗೆ ತನಗೆ ತಿಳಿಯದೇ 100 ಕೋಟಿ ಹಣ ಜಮೆಯಾಗಿದೆ ಎಂದು ಆರೋಪಿಸಿ ಉತ್ತರ ಪ್ರದೇಶದ ಮಹಿಳೆಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಘಾಜಿಯಾಬಾದ್: ತನ್ನ ಜನ್ ಧನ್ ಖಾತೆಗೆ ತನಗೆ ತಿಳಿಯದೇ 100 ಕೋಟಿ ಹಣ ಜಮೆಯಾಗಿದೆ ಎಂದು ಆರೋಪಿಸಿ ಉತ್ತರ ಪ್ರದೇಶದ ಮಹಿಳೆಯೊಬ್ಬಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.

ಉತ್ತರ ಪ್ರದೇಶದ ಘಾಜಿಯಾಬಾದ್ ನವರಾದ ಶೀತಲ್ ಯಾದವ್ ಎಂಬ ಮಹಿಳೆ ಇತ್ತೀಚೆಗೆ ತನ್ನ ಖಾತೆಯಿಂದ 5000 ರು.ಗಳನ್ನು ಡ್ರಾ ಮಾಡಲು ಡಿಸೆಂಬರ್ 10ರಂದು ಐಸಿಸಿಐ ಬ್ಯಾಂಕ್ ಎಟಿಎಂಗೆ ತೆರಳಿದ್ದರು. ಈ ವೇಳೆ  ಖಾತೆಯಲ್ಲಿರುವ ಬಾಕಿ ಮೊತ್ತ ತಿಳಿಯಲು ಮಿನಿ ಸ್ಟೇಟ್ ಮೆಂಟ್ ತೆಗೆದುಕೊಂಡಾಗ ಖಾತೆಯಲ್ಲಿ 99,99,99,394. ರು. ಹಣವಿದೆ ಎಂದು ಬಂದಿತ್ತು. ಇದರಿಂದ ಮೊದಲು ಅಚ್ಚರಿಗೊಂಡ ಮಹಿಳೆ ಬಳಿಕ ಮುದ್ರಣ ದೋಷವಿರಬಹುದು  ಎಂದು ಬೇರೊಂದು ಎಟಿಎಂಗೆ ತೆರಳಿ ಪರೀಕ್ಷಿಸಿದಾಗ ಅಲ್ಲಿಯೂ ಅದೇ ಮೊತ್ತದ ಬಾಕಿ ತೋರಿಸುತ್ತಿತ್ತು.

ಇದರಿಂದ ಗಾಬರಿಯಾದ ಮಹಿಳೆ ಮೀರತ್ ನಲ್ಲಿರುವ ಎಸ್ ಬಿಐ ಬ್ಯಾಂಕಿಗೆ ದೌಡಾಯಿಸಿ ತನ್ನ ಬ್ಯಾಂಕ್ ಅಧಿಕಾರಿಗಳಿಗೆ ಖಾತೆಯಲ್ಲಿ ಅಪಾರ ಪ್ರಮಾಣದ ಹಣ ಜಮೆಯಾಗಿರುವ ಕುರಿತು ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ  ಮಹಿಳೆಯ ಮಾತನ್ನು ನಂಬದ ಅಧಿಕಾರಿಗಳು ದೋಷ ಸರಿಪಡಿಸುವುದಾಗಿ ಹೇಳಿ ಕಳುಹಿಸಿದ್ದಾರೆ. ಮಾರನೆಯ ದಿನ ಪರೀಕ್ಷಿಸಿದಾಗ ಮತ್ತದೇ ಬಾಕಿ ಮೊತ್ತ ತೋರಿಸಿದ್ದು, ಮತ್ತೆ ಬ್ಯಾಂಕಿಗೆ ಬಂದ ಮಹಿಳೆ ಈ ಬಗ್ಗೆ ದೂರು  ನೀಡಿದ್ದಾಳೆ. ಆದರೆ ಬ್ಯಾಂಕ್ ಸಿಬ್ಬಂದಿ ಸರಿಯಾಗಿ ಪ್ರತಿಕ್ರಿಯಿಸದ ಕಾರಣ ಮನೆಗೆ ಬಂದ ಶೀತಲ್ ಯಾದವ್ ತಮ್ಮ ಪತಿ ಜಿಲೇದರ್ ಯಾದವ್ ಬಳಿ ನಡೆದ ವಿಚಾರವನ್ನು ತಿಳಿಸಿದ್ದಾಳೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ  ದೂರು ನೀಡುವ ಕುರಿತು ದಂಪತಿಗಳು ನಿರ್ಧಾರ ಕೈಗೊಂಡಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿಗೆ ದೂರು ನೀಡುವುದು ಹೇಗೆ ಚಿಂತಿಸುತ್ತಿದ್ದ ದಂಪತಿಗೆ ವಿದ್ಯಾವಂತರೊಬ್ಬರು ಸಹಾಯ ಮಾಡಿದ್ದಾರೆ.

ಅವರ ನೆರವಿನಿಂದ ಡಿಸೆಂಬರ್ 26ರಂದು ಮಹಿಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಿದ್ದು, ಪ್ರಧಾನಿಗಳ ಕಾರ್ಯಾಲಯ ಕೂಡ ಈ ಬಗ್ಗೆ ನೆರವು ನೀಡುವುದಾಗಿ ತಿಳಿಸಿದೆ.

ನೋಟು ನಿಷೇಧದ ಬಳಿಕ ಜನಧನ್ ಖಾತೆಗಳಲ್ಲಿ ಅಪಾರ ಪ್ರಮಾಣದ ನಗದು ಜಮೆಯಾಗುತ್ತಿದ್ದು, ಕಪ್ಪುಹಣ ಜಮೆಯಾಗುತ್ತಿರುವ ಕುರಿತು ಶಂಕೆ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರ ಜನ್ ಧನ್ ಖಾತೆಗಳಲ್ಲಿನ ನಗದು ಜಮೆಗೆ 50  ಸಾವಿರ ರುಗಳ ಮಿತಿ ಹೇರಿತ್ತು. ಅದಕ್ಕಿಂತಲೂ ಹೆಚ್ಚು ಹಣ ಜಮೆ ಮಾಡುವ ಖಾತೆಗಳ ವಿರುದ್ಧ ವಿಚಾರಣೆ ನಡೆಸುವುದಾಗಿಯೂ ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com