26/11 ಮುಂಬೈ ದಾಳಿ ಪ್ರಕರಣ: ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಹೆಡ್ಲಿ ಸಾಕ್ಷ್ಯ

26/11 ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಸೆಷನ್ಸ್ ಕೋರ್ಟ್ ಸೋಮವಾರ ವಿಡಿಯೋ ಕಾನ್ಫರೆನ್ಸ್...
ಉಗ್ರ ಡೇವಿಡ್ ಹೆಡ್ಲಿ
ಉಗ್ರ ಡೇವಿಡ್ ಹೆಡ್ಲಿ
ಮುಂಬೈ: 26/11 ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಸೆಷನ್ಸ್ ಕೋರ್ಟ್ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಉಗ್ರ ಡೇವಿಡ್ ಹೆಡ್ಲಿಯ ವಿಚಾರಣೆ ನಡೆಸಲಿದೆ.
ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಡೇವಿಡ್ ಹೆಡ್ಲಿ ಮುಂಬೈ ದಾಳಿಯ ಪ್ರಮುಖ ಆರೋಪಿ. ಅಮೆರಿಕದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಡೇವಿಡ್ ಹೆಡ್ಲಿ ಮುಂಬೈ ನ್ಯಾಯಾಲಯದ ವಿಚಾರಣೆ ಎದುರಿಸಲಿದ್ದಾರೆ. 
ಅಮೆರಿಕಾದ ರಹಸ್ಯ ಸ್ಥಳದಿಂದ ಸುಮಾರು 5 ಗಂಟೆಗಳ ಕಾಲ ನಡೆಯೋ ವಿಡಿಯೋ ಕಾನ್ಫರೆನ್ಸ್ ಮೂಲಕ ಸಾಕ್ಷ್ಯ ನೀಡಲಿದ್ದಾರೆ. ಈ ವೇಳೆ ಮುಂಬೈ ಕೋರ್ಟ್ ನಲ್ಲಿ ಎಸ್ ಪಿಪಿ ಉಜ್ವಲ್ ನಿಕ್ಕಮ್, ಉಗ್ರ ಹೆಡ್ಲಿ ಪರ ವಕೀಲ ಮಹೇಶ್ ಜೇಠ್ಮಲಾನಿ, ಅಮೆರಿಕ ರಾಯಭಾರ ಕಚೇರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
ಈ ಹಿಂದೆ ಎನ್ ಐಎ ವಿಚಾರಣೆ ನಡೆಸಿದ ವೇಳೆ, ದಾಳಿಯಲ್ಲಿ ಐಎಸ್ ಐ ಕೈವಾಡವಿದೆ ಎಂದು ಹೆಡ್ಲಿ ಖಚಿತ ಪಡಿಸಿದ್ದನು. ದಾಳಿಗೂ ಮುನ್ನ ಈತ ಮುಂಬೈಗೆ ಭೇಟಿ ನೀಡಿ ದಾಳಿಯ ರೂಪುರೇಷೆ ಸಿದ್ಧಪಡಿಸಿದ್ದ ಎಂಬ ಮಾಹಿತಿ ನೀಡಿದ್ದನು. 
26 /11 ಮುಂಬೈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪಾಕಿಸ್ತಾನಿ-ಅಮೆರಿಕನ್ ಲಷ್ಕರ್ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿ, ಯುಎಸ್ ನಲ್ಲಿ 35 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಮುಂಬೈ ಕೋರ್ಟ್ ನಲ್ಲಿ ನನ್ನ ವಿರುದ್ಧ ಸಲ್ಲಿಸಲಾಗಿರುವ ಆರೋಪಪಟ್ಟಿಯನ್ನು ಪಡೆದಿದ್ದೇನೆ, ಯುಎಸ್ ನಲ್ಲಿ ಯಾವ ಆರೋಪ ಹೊರಿಸಲಾಗಿದೆಯೋ ಮುಂಬೈ ನ್ಯಾಯಾಲಯದಲ್ಲೂ ಅದೇ ಆರೋಪವನ್ನು ಹೊರಿಸಲಾಗಿದೆ. ಈ ಆರೋಪಗಳಲ್ಲಿ ನನ್ನನ್ನು ದೋಷಿಯೆಂದು ಯುಎಸ್ ನ್ಯಾಯಾಲಯ ತೀರ್ಪು ನೀಡಿದ್ದು ನಾನು ಅಪರಾಧದಲ್ಲಿ ಭಾಗಿಯಾಗಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದೆ ಎಂದು ಹೇಡ್ಲಿ ಹೇಳಿದ್ದನು. 
ಕ್ಷಮಾದಾನ ನೀಡುವುದಾದರೆ ಅಪ್ರೂವರ್ ಆಗಿ ತಪ್ಪೊಪ್ಪಿಕೊಳ್ಳಲು ಸಿದ್ಧ ಎಂದು ಡೇವಿಡ್ ಹೆಡ್ಲಿ ಮುಂಬೈ ನ್ಯಾಯಾಲಯಕ್ಕೆ ಮನವಿ ಮಾಡಿದ್ದ. ಈ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com