
ನವದೆಹಲಿ: ಸಿಯಾಚಿನ್ ನಲ್ಲಿ ಕಳೆದ ವಾರ ಉಂಟಾದ ಭೀಕರ ಹಿಮಪಾತದಿಂದಾಗಿ ನಾಪತ್ತೆಯಾಗಿ ಸತತ 6 ದಿನಗಳ ಬಳಿಕ ಪತ್ತೆಯಾಗಿದ್ದ ಕರ್ನಾಟಕದ ಯೋಧ ಲ್ಯಾನ್ಸ್ ನಾಯಕ ಹನಮಂತಪ್ಪ ಕೊಪ್ಪದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಹಿಮಪಾತದಲ್ಲಿ ತನ್ನ ಸಹೋದ್ಯೋಗಿ 9 ಸೈನಿಕರೊಂದಿಗೆ ನಾಪತ್ತೆಯಾಗಿದ್ದ ಹನಮಂತಪ್ಪ ನಾಯಕ ಸತತ 6 ದಿನಗಳ ಮಂಜಿನಡಿಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ಮಾಡಿದ್ದರು. ನಿನ್ನೆ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಹನಮಂತಪ್ಪ ಕೊಪ್ಪದ ಅವರನ್ನು ರಕ್ಷಿಸಲಾಗಿತ್ತು. ಬಳಿಕ ಅವರನ್ನು ಸೇನಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ದೌಲಾ ಕಾನ್ ನಲ್ಲಿರುವ ಸೇನಾ ಸಂಶೋಧನಾ ಆಸ್ಪತ್ರೆಯಲ್ಲಿ ಹನಮಂತಪ್ಪ ಕೊಪ್ಪದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆ ಮೂಲಗಳ ಪ್ರಕಾರ ಅವರ ಆರೋಗ್ಯ ಸ್ಥಿತಿ ತೀರಾ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ಅವರನ್ನು ತುರ್ತ ನಿಗಾ ಘಟಕದಲ್ಲಿಯೇ ಇಟ್ಟು ಚಿಕಿತ್ಸೆ ಮುಂದುವರೆಸಲು ವೈದ್ಯರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಗಾಯಗೊಂಡ ಯೋಧ ಹನಮಂತಪ್ಪ ಕೊಪ್ಪದ ಅವರ ಆರೋಗ್ಯ ವಿಚಾರಣೆಗಾಗಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದು, ಆರೋಗ್ಯ ಸ್ಥಿತಿ ವಿಚಾರಿಸಿದ್ದಾರೆ. ಇದೇ ವೇಳೆ ಭೂಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ಅವರು ಕೂಡ ಆಗಮಿಸಿ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಫೆಬ್ರವರಿ 3ರಂದು ಸಿಯಾಚಿನ್ ಗಡಿಯಲ್ಲಿ ಸಂಭವಿಸಿದ್ದ ಭೀಕರ ಹಿಮಪಾತದಿಂದಾಗಿ ಅಲ್ಲಿ ಪಹರೆ ನಡೆಸುತ್ತಿದ್ದ ಮದ್ರಾಸ್ ರೆಜಿಮೆಂಟ್ ನ ಸುಮಾರು 10 ಯೋಧರು ಹಿಮದಲ್ಲಿ ಜೀವಂತ ಸಮಾಧಿಯಾಗಿದ್ದರು. ಈ ವೇಳೆ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಕರ್ನಾಟಕದ ಮೂಲದ ಲ್ಯಾನ್ಸ್ ನಾಯಕ್ ಹನಮಂತಪ್ಪ ಕೊಪ್ಪದ ಅವರು ಪವಾಡಸದೃಶವಾಗಿ ಬದುಕುಳಿದಿದ್ದರು. ಸುಮಾರು 25 ಅಡಿಗಳ ಕೆಳಗೆ ಸಿಲುಕಿದ್ದ ಹನಮಂತಪ್ಪ ಕೊಪ್ಪದ ಅವರು ಸುಮಾರು ಮೈನಸ್ 40 ಡಿಗ್ರಿ ಉಷ್ಣಾಂಶದಲ್ಲಿ ಸತತ 6 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದರು.
ಪ್ರಸ್ತುತ ಘಟನೆ ನಡೆದ ಸಿಯಾಚಿನ್ ನಲ್ಲಿ ಮೃತ ದೇಹಗಳ ಶೋಧ ಕಾರ್ಯ ಮುಂದುವರೆದಿದೆ ಸೇನಾ ಮೂಲಗಳು ತಿಳಿಸಿವೆ.
Advertisement