ರೇವಣ್ಣ ಬೈದಿದ್ದಕ್ಕೆ ನೊಂದು ರೈತ ಆತ್ಮಹತ್ಯೆ?

ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ್ಣ ಅವರ ಬೈಗುಳದಿಂದ ನೊಂದು ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ...
ರೇವಣ್ಣ ಬೈದಿದ್ದಕ್ಕೆ ನೊಂದು ರೈತ ಆತ್ಮಹತ್ಯೆ? (ಸಂಗ್ರಹ ಚಿತ್ರ)
ರೇವಣ್ಣ ಬೈದಿದ್ದಕ್ಕೆ ನೊಂದು ರೈತ ಆತ್ಮಹತ್ಯೆ? (ಸಂಗ್ರಹ ಚಿತ್ರ)

ಬೆಂಗಳೂರು: ಜೆಡಿಎಸ್ ಮುಖಂಡ ಹೆಚ್.ಡಿ.ರೇವಣ್ಣ ಅವರ ಬೈಗುಳದಿಂದ ನೊಂದು ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಹಾಸನ ಜಿಲ್ಲೆಯ ಅಕ್ಕಿಚೌಡೇನಹಳ್ಳಿಯ ರೈತ ಗಂಗಾಧರ್ ಎಂಬಾತ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಹೇಳಲಾಗುತ್ತಿದೆ. ಈ ಸಂಬಂಧ ಖಾಸಗಿ ಮಾಧ್ಯಮಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ವಿಡಿಯೋದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ರೇವಣ್ಣ ಅವರ ಕುರಿತು ಮಾತನಾಡಿದ್ದಾನೆ.

ಇದೀಗ ಇದೇ ವಿಡಿಯೋ ತುಣುಕು ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗಳಿಗೆ ಕಾರಣವಾಗಿದೆ. ಪ್ರಸ್ತುತ ದೊರಕಿರುವ ವಿಡಿಯೋ ತುಣುಕಿನಲ್ಲಿ ಆತ್ಮಹತ್ಯೆಗೆ ರೇವಣ್ಣ ಅವರು ಬೈದಿದ್ದೇ ಕಾರಣ ಎಂದು ರೈತ ಹೇಳಿಕೊಂಡಿದ್ದಾನೆ. ರೇವಣ್ಣ ಅವರು ನಾನು ಕಾಂಗ್ರೆಸ್'ಗೆ ಸಹಾಯ ಮಾಡಿದ್ದೇನೆಂದು ಹೇಳಿ ಬೈದರು. ಇಲ್ಲ ಎಂದು ಹೇಳಿದರೂ ಕೇಳಲಿಲ್ಲ. ಅವರ ಬೈಗುಳ ಸಾಕಷ್ಟು ನೋವುಂಟು ಮಾಡಿತು. ನಾನು ಜೆಡಿಎಸ್ ಗಾಗಿ ಸಾಕಷ್ಟು ಕೆಲಸವನ್ನು ಮಾಡಿದ್ದೇನೆ. ಹೀಗಿದ್ದರೂ ಬೈದರು ಹಾಗಾಗಿ ಆತ್ಮಹತ್ಯೆಗೆ ಪ್ರಯತ್ನಿಸಿದೆ ಎಂದು ಹೇಳಿಕೊಂಡಿದ್ದಾನೆ.

ಮೂಲಗಳ ಪ್ರಕಾರ ರೈತ ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗುತ್ತಿದೆ. 1993ರಲ್ಲಿ ಹೊಳೆ ನರಸೀಪುರದ ಖಾದಿ ಗ್ರಾಮೀಣ ಬ್ಯಾಂಕಿನಲ್ಲಿ ರು.4.5 ಲಕ್ಷ ಹಣವನ್ನು ಸಾಲ ಪಡೆದಿದ್ದ ರೈತ, ಇದೀಗ ರು.21 ಲಕ್ಷ ಹಣವನ್ನು ಕಟ್ಟಬೇಕು ಎಂದು ಬ್ಯಾಂಕ್ ಅಧಿಕಾರಿಗಳು ಪದೇ ಪದೇ ನೋಟಿಸ್'ನ್ನು ಜಾರಿ ಮಾಡಿದ್ದಾರೆ. ಇದರಿಂದ ನೊಂದ ರೈತ ಮದ್ಯದಲ್ಲಿ ವಿಷ ಸೇರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ರೈತ ಜಿಲ್ಲಾ ಪಂಚಾಯಿತಿ ಚುನಾವಣೆಗೆ ತಮ್ಮನ್ನು ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಕೇಳಿ ಮಾಜಿ ಸಚಿವ ರೇವಣ್ಣ ಅವರ ಬಳಿ ಹೋಗಿದ್ದಾಗ ರೇವಣ್ಣ ಅವರು ನಿಂದಿಸಿದ್ದರು. ಹೀಗಾಗಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗುತ್ತಿದೆ. ಇದೀಗ ಹೊಳೆನರಸೀಪುರ ಪಟ್ಟಣದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.

ಘಟನೆ ಕುರಿತಂತೆ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಗಂಗಾಧರ್ ಅವರ ಪುತ್ರ ಮೋಹನ್ ಅವರು, ನನ್ನ ತಂದೆ ಸಾವನ್ನಪ್ಪಿರುವುದು ಸಾಲಬಾಧೆಯಿಂದ. ಕಳೆದ ಎರಡು ತಿಂಗಳಿಂದಲೂ ಮನೆಗೆ ನೋಟಿಸ್ ಗಳು ಬಂದಿದ್ದವು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರೇವಣ್ಣ ಅವರ ಮುಖಕ್ಕೆ ಮಸಿಬಳಿಯಲು ಈ ರೀತಿಯ ಪ್ರಯತ್ನಗಳನ್ನು ಮಾಡಿದ್ದಾರೆ. ನನ್ನ ತಂದೆ ಜೆಡಿಎಸ್ ಗಾಗಿ ಸಾಕಷ್ಟು ಕೆಲಸವನ್ನು ಮಾಡಿದ್ದಾರೆ. ಅವರಿಗೆ ಎಲ್ಲಾ ಪಕ್ಷದ ನಾಯಕರೂ ಆಪ್ತರಾಗಿದ್ದು, ಎಲ್ಲರೂ ಮನೆಗೆ ಬಂದು ಹೋಗುತ್ತಿರುತ್ತಾರೆ. ಇದನ್ನೇ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಕೊನೆ ಕ್ಷಣದಲ್ಲಿ ಕೊಂಚ ಮಾನವೀಯತೆಯನ್ನು ತೋರಿದ್ದರೆ ನನ್ನ ತಂದೆ ಬದುಕುತ್ತಿದ್ದರು. ರೇವಣ್ಣ ವಿರುದ್ಧ ಅಪಪ್ರಚಾರ ಮಾಡುವ ಪ್ರಯತ್ನ ನಡೆಯಬಾರದು. ರೇವಣ್ಣ ಅವರು ಕುಟುಂಬಕ್ಕೆ ಸಾಕಷ್ಟು ಸಹಾಯವನ್ನು ಮಾಡಿದ್ದು, ನಮಗೆ ಅವರಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com