ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ: ಆತಂಕ ವ್ಯಕ್ತಪಡಿಸಿ ಅಮೆರಿಕ ಸಂಸದರಿಂದ ಮೋದಿಗೆ ಪತ್ರ

ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ದೌರ್ಜನ್ಯಕ್ಕೊಳಗಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕದ 34 ಪ್ರಮುಖ ಸಂಸದರು ಪತ್ರ ಬರೆದಿದ್ದಾರೆ
ಧಾರ್ಮಿಕ ಅಲ್ಪಸಂಖ್ಯಾತರು (ಸಾಂಕೇತಿಕ ಚಿತ್ರ )
ಧಾರ್ಮಿಕ ಅಲ್ಪಸಂಖ್ಯಾತರು (ಸಾಂಕೇತಿಕ ಚಿತ್ರ )

ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ದೌರ್ಜನ್ಯಕ್ಕೊಳಗಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕದ 34 ಪ್ರಮುಖ ಸಂಸದರು ಪತ್ರ ಬರೆದಿದ್ದು ಧಾರ್ಮಿಕ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕು ಎಂದು ಮನವಿ ಮಾಡಿದ್ದಾರೆ.
ಧಾರ್ಮಿಕ ಅಲ್ಪಸಂಖ್ಯಾತರಾದ ಕ್ರೈಸ್ತರು, ಮುಸ್ಲಿಮರು, ಸಿಕ್ಖರ ಮೇಲೆ ದೌರ್ಜನ್ಯ ಎಸಗಲಾಗುತ್ತಿದ್ದು, ದೌರ್ಜನ್ಯ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು 8 ಜನ ಸೆನೆಟರ್ ಗಳು ಸೇರಿದಂತೆ ಅಮೆರಿಕದ 34 ಸಂಸದರು ಮೋದಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಆರ್ ಎಸ್ ಎಸ್ ಸಂಘಟನೆ ಚಟುವಟಿಕೆಗಳನ್ನು ಕೇಂದ್ರ ಸರ್ಕಾರ ನಿಯಂತ್ರಿಸಿ ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಾಪಾಡಲು ಭಾರತೀಯ ಭದ್ರತಾ ಪಡೆಗಳಿಗೆ ನಿರ್ದೇಶನ ನೀಡಬೇಕೆಂದು  ಯುಎಸ್ ನ ಹೌಸ್ ಆಫ್  ರೆಪ್ರೆಸೆಂಟೆಟೀವ್ಸ್ ನ ಸದಸ್ಯರಾದ ಜೋಸೆಫ್ ಪಿಟ್ಸ್,  ಕೀತ್ ಎಲ್ಲಿಸನ್, ಬ್ರಾಡ್ ವೆನ್ಸ್ ಟ್ರಪ್, ಜಿಮ್ ಕೋಸ್ಟಾ, ಟ್ರೆಂಟ್ ಫ್ರಾಂಕ್ಸ್, ಟೆಡ್ ಪೋ ಮತ್ತು ಮಾರ್ಕ್ ವಾಕರ್ ಹಾಗೂ 8 ಸೆನೆಟರ್ಸ್ ಗಳು ಮೋದಿ ಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ಉದಾಹರಣೆ ನೀಡಿರುವ ಅಮೆರಿಕ ಸಂಸದರು, 2014 ಜೂನ್ 17 ರಂದು ಚತ್ತೀಸ್ ಗಢದ ಬಸ್ತಾರ್ ನ  50 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೈಗೊಳ್ಳಲಾದ ಹಿಂದೂಯೇತರ ಧಾರ್ಮಿಕ ಪ್ರಚಾರ ನಿಷೇಧ ಕ್ರಮವನ್ನು ಉಲ್ಲೇಖಿಸಿದ್ದಾರೆ.
ಹಿಂದೂಯೇತರ ಧರ್ಮ ಪ್ರಚಾರವನ್ನು ನಿಷೇಧ ಕ್ರೈಸ್ತ ಮತ ಆಚರಣೆಯನ್ನು ಪರಿಣಾಮಕಾರಿಯಾಗಿ ಕಾನೂನುಬಾಹಿರವನ್ನಾಗಿಸಲಾಗಿದೆ. ಇದರಿಂದ 300 ಕ್ಕೂ ಹೆಚ್ಚು ಕ್ರೈಸ್ತ ಕುಟುಂಬಗಳ ಮೇಲೆ ದಾಳಿ ನಡೆದಿದೆ. ಹಿಂದುಯೇತರ ಧರ್ಮದವರನ್ನು ಹಿಂದೂಧರ್ಮಕ್ಕೆ ಮತಾಂತರಗೊಳ್ಳಬೇಕೆಂದು ಒತ್ತಾಯ ಹೇರಲಾಗುತ್ತಿದೆ ಎಂದು ಮೋದಿಗೆ ಬರೆದ ಪತ್ರದಲ್ಲಿ ಅಮೆರಿಕ ಸಂಸದರು ಆರೋಪಿಸಿದ್ದಾರೆ.
ಮುಸ್ಲಿಂ ಧರ್ಮದ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ಬಗ್ಗೆಯೂ ಅಮೆರಿಕ ಸಂಸದರ ಪತ್ರ ಆತಂಕ ವ್ಯಕ್ತಪಡಿಸಿದ್ದು ಧಾರ್ಮಿಕ ಸ್ವಾತಂತ್ರ್ಯ ಮತ್ತು ಕೋಮು ಸಾಮರಸ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅದನ್ನು ಕಾರ್ಯರೂಪಕ್ಕೆ ತರಬೇಕೆಂದು ಮನವಿ ಮಾಡುಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com