ಭಾರತದ ಜೈಲುಗಳಲ್ಲಿದ್ದ 189 ಮಂದಿ ಪಾಕ್ ಕೈದಿಗಳು ನಾಪತ್ತೆ..!

ಉಭಯ ರಾಷ್ಟ್ರಗಳ ನಡುವೆ ಬಾಂಧವ್ಯ ವೃದ್ಧಿಯಾಗುವ ಮುನ್ಸೂಚನೆ ದೊರೆತ ಬೆನ್ನಲ್ಲೇ ಭಾರತದ ವಿವಿಧ ಜೈಲುಗಳಲ್ಲಿದ್ದ 189 ಮಂದಿ ಪಾಕಿಸ್ತಾನಿ ಕೈದಿಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ...
ಭಾರತದಲ್ಲಿದ್ದ ಪಾಕಿಸ್ತಾನ ಮೂಲದ ಕೈದಿಗಳು ನಾಪತ್ತೆ (ಸಂಗ್ರಹ ಚಿತ್ರ)
ಭಾರತದಲ್ಲಿದ್ದ ಪಾಕಿಸ್ತಾನ ಮೂಲದ ಕೈದಿಗಳು ನಾಪತ್ತೆ (ಸಂಗ್ರಹ ಚಿತ್ರ)

ನವದೆಹಲಿ: ಭಾರತದ ವಿವಿಧ ಜೈಲುಗಳಲ್ಲಿದ್ದ ಪಾಕಿಸ್ತಾನ ಮೂಲದ 189 ಮಂದಿ ಕೈದಿಗಳು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಪಾಕಿಸ್ತಾನ ಪ್ರವಾಸದ ಬಳಿಕ ಉಭಯ ರಾಷ್ಟ್ರಗಳ ನಡುವೆ ಬಾಂಧವ್ಯ ವೃದ್ಧಿಯಾಗುವ ಮುನ್ಸೂಚನೆ ದೊರೆಯುತ್ತಿರುವ ನಡುವೆಯೇ ಈ ಸುದ್ದಿ  ಬಹಿರಂಗವಾಗಿದ್ದು, ಭಾರತದಲ್ಲಿದ್ದ 189 ಪಾಕಿಸ್ತಾನಿ ಕೈದಿಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕೈದಿಗಳ ಕುರಿತು ಉಭಯ ರಾಷ್ಟ್ರಗಳು ವಿನಿಮಯ ಮಾಡಿಕೊಂಡಿರುವ  ಅಂಕಿ-ಅಂಶಗಳ ವರದಿಯ ಪ್ರಕಾರ ಈ ವರದಿ ಬಹಿರಂಗವಾಗಿದ್ದು, ಪಾಕಿಸ್ತಾನ ಸರ್ಕಾರ ಕೂಡ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ.

ರಾಜತಾಂತ್ರಿಕ ಮಾರ್ಗದಲ್ಲೇ ಭಾರತ ಮತ್ತು ಪಾಕಿಸ್ತಾನದ ಅಧಿಕಾರಿಗಳು ಶುಕ್ರವಾರ ನವದೆಹಲಿ ಮತ್ತು ಇಸ್ಲಾಮಾಬಾದ್​ನಲ್ಲಿ ಏಕಕಾಲದಲ್ಲಿ ಕೈದಿಗಳ ಪಟ್ಟಿ ವಿನಿಮಯ ಮಾಡಿಕೊಂಡಿದ್ದು,  ಇದರಲ್ಲಿ ಕೈದಿಗಳ ನಾಪತ್ತೆ ಕುರಿತ ಮಾಹಿತಿ ಸೇರಿರುವುದು ಬಹಿರಂಗಗೊಂಡಿದೆ. ಎರಡು ದೇಶಗಳ ನಡುವೆ 2008, ಮೇ 31ರಂದು ಮಾಡಿಕೊಳ್ಳಲಾದ ಒಪ್ಪಂದದ ಪ್ರಕಾರ ವರ್ಷದಲ್ಲಿ ಎರಡು  ಸಲ ಈ ರೀತಿ ಕೈದಿಗಳ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತದೆ.

ಶುಕ್ರವಾರ ಮಾಡಿಕೊಳ್ಳಲಾದ  ವಿನಿಮಯ ವರದಿಯ ಪ್ರಕಾರ ಮೀನುಗಾರರು ಸೇರಿದಂತೆ ಒಟ್ಟು 189 ಮಂದಿ ಪಾಕಿಸ್ತಾನಿ ಕೈದಿಗಳ ವಿವರ ಪಟ್ಟಿಯಲ್ಲಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ  ಪಾಕಿಸ್ತಾನ ಸರ್ಕಾರ ಕೂಡ ತನ್ನ ಆಕ್ಷೇಪವೆತ್ತಿದ್ದು, ಭಾರತದ ವಿವಿಧ ಜೈಲುಗಳಲ್ಲಿ ಪಾಕಿಸ್ತಾನದ 113 ಮಂದಿ ಮೀನುಗಾರರು ಸೇರಿದಂತೆ ಒಟ್ಟು 460 ಕೈದಿಗಳಿದ್ದು, ಈ ಪೈಕಿ ಭಾರತ ಸರ್ಕಾರ 17  ಮಂದಿ ಮೀನುಗಾರರನ್ನು ಒಳಗೊಂಡ 271 ಮಂದಿಯ ಪಟ್ಟಿಯನ್ನು ಮಾತ್ರ ನೀಡಿದೆ ಎಂದು ಹೇಳಿದೆ. ಇದೇ ಜನವರಿ 25ರಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಅವರು  ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಈ ವಿಚಾರ ಪ್ರಸ್ತಾಪ ಮಾಡಲು ಪಾಕಿಸ್ತಾನದ ಅಧಿಕಾರಿಗಳು ಮುಂದಾಗಿದ್ದಾರೆ.

ಒಂದು ವೇಳೆ ಪಾಕಿಸ್ತಾನ ಸರ್ಕಾರದ ಆಕ್ಷೇಪ ನಿಜವೇ ಆಗಿದ್ದರೆ ನಾಪತ್ತೆಯಾದ ಕೈದಿಗಳು ಎಲ್ಲಿ ನಾಪತ್ತೆಯಾದರು? ಈಗ ಎಲ್ಲಿದ್ದಾರೆ? ಎಂಬಿತ್ಯಾದಿ ಅಂಶಗಳನ್ನು ಭಾರತ ಸರ್ಕಾರ ಕಲೆ  ಹಾಕಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com