
ಪಠಾಣ್ ಕೋಟ್: ಪಠಾಣ್ ಕೋಟ್ ನಲ್ಲಿ ಸೇನಾ ವಾಯುನೆಲೆಗೆ ಉಗ್ರರು ಒಳಚರಂಡಿ ಪೈಪ್ ಗಳ ಮೂಲಕ ಒಳಹೊಕ್ಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಉಗ್ರರ ದಾಳಿ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಸೇನಾಧಿಕಾರಿಗಳು ಇಷ್ಟು ಪ್ರಮಾಣದ ಉಗ್ರರು ಹೇಗೆ ವಾಯುನೆಲೆ ಪ್ರವೇಶಿಸಿದರು ಎಂಬ ಕುರಿತು ಗಂಭೀರವಾಗಿ ತನಿಖೆ ನಡೆಸುತ್ತಿದ್ದು, ಒಳಚರಂಡಿ ಪೈಪ್ ಮೂಲಕವಾಗಿ ಒಳ ಹೊಕ್ಕಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ ಎಂದು ತಿಳಿದುಬಂದಿದೆ. ಏಕೆಂದರೆ ವಾಯುನೆಲೆಗೆ ಅಳವಡಿಸಿರುವ ಒಳಚರಂಡಿ ಪೈಪ್ ಗಳು ನಲ್ವಾ ನಾಲೆಗೆ ಸಂಪರ್ಕ ಹೊಂದಿದೆ. ಹೀಗಾಗಿ ಅಲ್ಲಿಂದಲೇ ಉಗ್ರರು ಒಳಚರಂಡಿ ಪೈಪ್ ಮೂಲಕ ವಾಯುನೆಲೆ ಪ್ರವೇಶಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಲ್ಲದೆ ಕೆಲ ಉಗ್ರರು ಸ್ಥಳೀಯ ಪೊಲೀಸ್ ಅಧಿಕಾರಿಯ ಜೀಪ್ ಅನ್ನು ಅಪಹರಿಸಿ ಪೊಲೀಸ್ ಸಮವಸ್ತ್ರ ಧರಿಸಿ ವಾಯುನೆಲೆ ಪ್ರವೇಶಿಸಿದ್ದಾರೆ. ಅಂತೆಯೇ ಪಾಕಿಸ್ತಾನದಲ್ಲಿರುವ ತಮ್ಮ ನಾಯಕರನ್ನು ಸಂಪರ್ಕಿಸಲು ಪೊಲೀಸ್ ಅಧಿಕಾರಿಯ ಮೊಬೈಲ್ ಅನ್ನು ಬಳಕೆ ಮಾಡಿಕೊಂಡಿದ್ದಾರೆ. ಉಗ್ರರು ಮಾಡಿದ್ದ ಕರೆಗಳನ್ನು ಈಗಾಗಲೇ ಗುಪ್ತಚರ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿದ್ದು, ಹೆಚ್ಚಿನ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.
ಮೊದಲೇ ಎಚ್ಚರಿಸಿದ್ದ ಗುಪ್ತಚರ ಇಲಾಖೆ
ಇನ್ನು ಉಗ್ರರ ದಾಳಿ ಕುರಿತು ಕೇಂದ್ರ ಗುಪ್ತಚರ ಇಲಾಖೆ ಮೊದಲೇ ಎಚ್ಚರಿಕೆ ನೀಡಿತ್ತು ಎಂದು ತಿಳಿದುಬಂದಿದೆ. ಇದಾಗ್ಯೂ ವಾಯುನೆಲೆಯಲ್ಲಿ ಭದ್ರತಾ ವೈಫಲ್ಯವಾಗಿದ್ದು, ಸೇನಾಧಿಕಾರಿಗಳ ಗಂಭೀರ ಚಿಂತನೆಗೆ ಕಾರಣವಾಗಿದೆ.
Advertisement