ಪಠಾಣ್ ಕೋಟ್ ಕಾರ್ಯಾಚರಣೆ ಅಂತ್ಯ, ಕೂಂಬಿಂಗ್ ಮುಂದುವರೆದಿದೆ: ಪರಿಕ್ಕರ್

ಪಂಜಾಬ್ ನ ಪಠಾಣ್ ಕೋಟ್ ನಲ್ಲಿರುವ ಸೇನಾ ವಾಯುನೆಲೆಯಲ್ಲಿ ಸತತ 3 ದಿನಗಳಿಂದ ನಡೆದಿದ್ದ ಉಗ್ರನಿಗ್ರಹ ಕಾರ್ಯಾಚರಣೆ ಅಂತ್ಯವಾಗಿದ್ದು, ಎಲ್ಲಾ ಆರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಮಂಗಳವಾರ ಹೇಳಿದ್ದಾರೆ.
ಪಠಾಣ್ ಕೋಟ್ ನಲ್ಲಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸುದ್ದಿಗೋಷ್ಠಿ
ಪಠಾಣ್ ಕೋಟ್ ನಲ್ಲಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸುದ್ದಿಗೋಷ್ಠಿ
Updated on

ಪಠಾಣ್ ಕೋಟ್: ಪಂಜಾಬ್ ನ ಪಠಾಣ್ ಕೋಟ್ ನಲ್ಲಿರುವ ಸೇನಾ ವಾಯುನೆಲೆಯಲ್ಲಿ ಸತತ 3 ದಿನಗಳಿಂದ ನಡೆದಿದ್ದ ಉಗ್ರ ನಿಗ್ರಹ ಕಾರ್ಯಾಚರಣೆ ಅಂತ್ಯವಾಗಿದ್ದು, ಎಲ್ಲಾ ಆರು ಉಗ್ರರನ್ನು  ಹತ್ಯೆಗೈಯ್ಯಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಮಂಗಳವಾರ ಹೇಳಿದ್ದಾರೆ.

ಇಂದು ಪಠಾಣ್ ಕೋಟ್ ನಲ್ಲಿನ ಸೇನಾ ವಾಯುನೆಲೆಗೆ ಭೇಟಿ ನೀಡಿರುವ ಪರಿಕ್ಕರ್ ಅವರು, ಸೇನಾಧಿಕಾರಿಗಳಿಂದ ಘಟನೆಯ ಮಾಹಿತಿ ಪಡೆದರು. ಅಲ್ಲದೆ ಸ್ವತಃ ಘಟನಾ ಸ್ಥಳಗಳಿಗೆ ತೆರಳಿ  ವೀಕ್ಷಿಸಿದರು. ಬಳಿಕ ಮಾತನಾಡಿದ ಪರಿಕ್ಕರ್ ಅವರು, ಸತತ 80 ಗಂಟೆಗಳ ನಿರಂತರ ಸೇನಾ ಕಾರ್ಯಾಚರಣೆ ಅಂತ್ಯವಾಗಿದೆ. ಭಾರತೀಯ ಸೇನೆ ಎಲ್ಲ 6 ಉಗ್ರರನ್ನು ಸದೆಬಡಿಯುವಲ್ಲಿ  ಯಶಸ್ವಿಯಾಗಿದೆ. ಆದರೆ ಘಟನಾ ಸ್ಥಳದಲ್ಲಿ ಕೂಂಬಿಂಗ್ ಮುಂದುವರೆದಿದ್ದು, ಹಿರಿಯ ಅಧಿಕಾರಿಗಳು ಕೂಂಬಿಂಗ್ ನಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

"ದೇಶದ ಪ್ರಮುಖ ಆಸ್ತಿಯಾದ ವಾಯುಸೇನೆಯ ಪ್ರಮುಖ ಯುದ್ಧೋಪಕರಣಗಳನ್ನು ತನ್ನ ಶೌರ್ಯ ಮತ್ತು ಧೈರ್ಯದಿಂದ ರಕ್ಷಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಇದಕ್ಕಾಗಿ  ಭಾರತೀಯ ಸೇನೆಯನ್ನು ಶ್ಲಾಘಿಸುತ್ತೇವೆ. ದುರಾದೃಷ್ಟವಶಾತ್ ದಾಳಿ ವೇಳೆ 5 ಯೋಧರು ಹುತಾತ್ಮರಾಗಿದ್ದಾರೆ. ಹುತಾತ್ಮ ಯೋಧರ ಕುಟುಂಬಕ್ಕೆ ತಲಾ 25 ಲಕ್ಷ ರು. ಪರಿಹಾರ  ನೀಡಲಾಗುತ್ತದೆ. ಅಲ್ಲದೆ ಹುತಾತ್ಮ ಯೋಧನ ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ. ದಾಳಿ ವೇಳೆ ಗಾಯಾಳುಗಳಾದ ಯೋಧರ ಪ್ರಕರಣವನ್ನು ಕದನದ ವೇಳೆ  ಗಾಯಗೊಂಡವರು ಎಂದು ಪರಿಗಣಿಸಿ ಅವರ ಕುಟುಂಬಗಳಿಗೆ ಸಂಬಂಧ ಪಟ್ಟ ಪರಿಹಾರ ನೀಡಲಾಗುತ್ತದೆ".

"ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾದ ಎಲ್ಲ ಸೈನಿಕರಿಗೂ ಅಭಿನಂದನೆ ತಿಳಿಸುತ್ತೇನೆ. ಉಗ್ರರ ವಿರುದ್ಧದ ಸೇನಾ ಕಾರ್ಯಾಚರಣೆ ಕಠಿಣವಾಗಿತ್ತು. ಕಾರ್ಯಚರಣೆ ವೇಳೆ ಎಲ್ಲಾ ಆರೂ ಉಗ್ರರನ್ನು ಹತ್ಯೆ ಗೈಯ್ಯಲಾಗಿದೆ. ಇಬ್ಬರು ಉಗ್ರರ ಮುಖ ಗುರುಹಿಡಿಯಲಾಗದಂತೆ ಸುಟ್ಟುಹೋಗಿದ್ದು, ಎಲ್ಲ ಮೃತ ದೇಹಗಳ ಡಿಎನ್ ಎ ಪರೀಕ್ಷೆ  ನಡೆಸಲಾಗುತ್ತದೆ. ಉಗ್ರರು ಆತ್ಮಾಹುತಿ ದಾಳಿಗೆ ಸನ್ನದ್ಧರಾಗಿ ಬಂದಿದ್ದರು. ಇಬ್ಬರು ಉಗ್ರರು ಅಡಗಿದ್ದ ಜಾಗದಲ್ಲಿ ಅತಿಯಾದ ಹಾನಿಯಾಗಿದೆ. ಉಗ್ರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಕೆ  ಮಾಡಿ ದಾಳಿ ನಡೆಸಿದ್ದರು. ಎಲ್ಲ ಶಸ್ತ್ರಾಸ್ತ್ರಗಳು ಪಾಕಿಸ್ತಾನದಲ್ಲಿ ತಯಾರಾಗಿದ್ದ ಕುರಿತು ಮಾಹಿತಿಗಳು ತಿಳಿದುಬಂದಿದೆ. ಉಗ್ರರು ಸುಮಾರು 40-50 ಗ್ರೆನೇಡ್ ಹಾಗೂ 40-30 ಕೆಜಿ ಗುಂಡುಗಳನ್ನು  ತಂದಿದ್ದರು. ದಾಳಿಯಲ್ಲಿ ಪಾಕಿಸ್ತಾನ ಕೈವಾಡವಿರುವ ಕುರಿತು ಶಂಕೆ ಇದೆ. ಈ ಬಗ್ಗೆ ಸಾಕಷ್ಟು ಸಾಕ್ಷ್ಯಗಳು ಲಭ್ಯವಾಗಿದೆ ಎಂದು ಪರಿಕ್ಕರ್ ಹೇಳಿದರು."

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com