
ಬೆಂಗಳೂರು: ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆಗೆ ಹಾದಿ ಸುಗಮವಾಗಿದೆ.
ನೇತ್ರಾವತಿ ನದಿಯಿಂದ ಬಯಲು ಸೀಮೆಯ ಪ್ರದೇಶಗಳಿಗೆ ಕುಡಿಯುವ ನೀರು ಹರಿಸುವ ಎತ್ತಿನಹೊಳೆ ಯೋಜನೆಗೆ ಚೆನ್ನೈನ ಹಸಿರುಪೀಠ ಹಸಿರು ನಿಶಾನೆ ತೋರಿಸಿದೆ. ಇದರೊಂದಿಗೆ ಅರ್ಧಕ್ಕೆ ನಿಂತಿದ್ದ ಬಹು ನಿರೀಕ್ಷಿತ ಯೋಜನೆಗೆ ಎದುರಾಗಿದ್ದ ಎಲ್ಲಾ ಅಡ್ಡಿ, ಆತಂಕಗಳೂ ನಿವಾರಣೆಯಾಗಿದೆ. ಎರಡು ದಿನಗಳ ಹಿಂದಷ್ಟೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಯೋಜನೆಯನ್ನು ಮುಂದುವರಿಸಲು ಅನುಮತಿ ನೀಡಿದ್ದು, ಇದನ್ನಾಧರಿಸಿ ಹಸಿರು ಪೀಠ ಕೂಡ ಯೋಜನೆ ಗೆ ಅಸ್ತು ಎಂದಿದೆ.
ಇದರಿಂದಾಗಿ ಕಾಮಗಾರಿ ಮುಂದು ವರಿಸಲು ಅವಕಾಶ ಸಿಕ್ಕಿದಂತಾಗಿದೆ. ಆದರೆ 13.93 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ಆರಂಬಿsಸಲು ಇನ್ನೂ ಕೆಲವು ಸಮಯ ಬೇಕು. ಕಾರಣ ಅರಣ್ಯ ಭಾಗದಲ್ಲಿ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರ ಕೇಂದ್ರ ಪರಿಸರ ಇಲಾಖೆ ವಿಧಿಸಿರುವ ಕೆಲವು ಷರತ್ತುಗಳನ್ನು ಪೂರೈಸಬೇಕಿದೆ.
ಇದೇ ವೇಳೆ, ಯೋಜನೆ ವಿರೋಧಿಸಿ ಮಂಗಳೂರು, ತುಮಕೂರು ಮತ್ತು ಹಾಸನದಿಂದ ಯತಿರಾಜ್, ಕಿಶೋರ್ ಮತ್ತು ಸೋಮಶೇಖರ್ ಎಂಬ ಪರಿಸರವಾದಿಗಳು ಹಸಿರು ಪೀಠಕ್ಕೆ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿ ಕೂಡ ವಜಾಗೊಂಡಿದ್ದು, ಉಳಿದಿರುವ ಕೆಲವು ತಾಂತ್ರಿಕ ವಿಚಾರಗಳ ವಿಚಾರಣೆಯನ್ನು ಜ.27ಕ್ಕೆ ಮುಂದೂಡಿದೆ. ಹೀಗಾಗಿ ಯೋಜನೆಗೆ ಉಂಟಾಗಿದ್ದ ಎಲ್ಲಾ ರೀತಿಯ ತೊಡಕುಗಳು ನಿವಾರಣೆಯಾದಂತಾಗಿದೆ ಎಂದು ಜಲಸಂಪನ್ಮೂಲ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement