ಪಾಕ್ ವಿವಿ ಮೇಲೆ ದಾಳಿ: ಕನಿಷ್ಠ 21 ಸಾವು, ದಾಳಿಯ ಹೊಣೆಹೊತ್ತ ತೆಹ್ರೀಕ್ ಇ ತಾಲಿಬಾನ್

ಪಾಕಿಸ್ತಾನದ ಬಚಾಖಾನ್ ವಿಶ್ವವಿದ್ಯಾಲದ ಮೇಲೆ ಬುಧವಾರ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ ಮತ್ತು ವಿದ್ಯಾರ್ಥಿಗಳು...
ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ರಕ್ಷಣಾ ಸಿಬ್ಬಂದಿ
ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ರಕ್ಷಣಾ ಸಿಬ್ಬಂದಿ
ಇಸ್ಲಾಮಾಬಾದ್: ಪಾಕಿಸ್ತಾನದ ಬಚಾಖಾನ್ ವಿಶ್ವವಿದ್ಯಾಲದ ಮೇಲೆ ಬುಧವಾರ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ ಮತ್ತು ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪಾಕಿಸ್ತಾನದ ಚರ್ಸಾದ್ದಾ ಜಿಲ್ಲೆಯ ಬಚಾಖಾನ್ ವಿಶ್ವವಿದ್ಯಾಲಯದ ಮೇಲೆ ಇಂದು ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಟ 21 ಮಂದಿ ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಸೇನಾ ಮೂಲಗಳ ಪ್ರಕಾರ ಸಾವಿನ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದ್ದು, 21ರಿಂದ 50ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮತ್ತೊಂದು ವರದಿಯ ಪ್ರಕಾರ ಉಗ್ರರು ಸುಮಾರು 60-70 ಮಂದಿ ವಿದ್ಯಾರ್ಥಿಗಳ ಹಣೆಗೆ ಗುಂಡು ಹೊಡೆದಿದ್ದು, ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಚಾರ ತಿಳಿಯುತ್ತಿದ್ದಂತೆಯೇ ಭದ್ರತಾ ಪಡೆಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ವರೆಗೂ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದ್ದು, ಇನ್ನು ಸುಮಾರು 2500ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ವಿವಿ ಆವರಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ನಾಲ್ವರು ಉಗ್ರರನ್ನು ಹತ್ಯೆ ಮಾಡಿದ ಯೋಧರು
ವಿವಿ ಮೇಲೆ ದಾಳಿ ಮಾಡಿದ ಉಗ್ರರ ಗುಂಪಿನಲ್ಲಿ ಈಗಾಗಲೇ ನಾಲ್ಕು ಮಂದಿ ಉಗ್ರರನ್ನು ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಡಿಐಜಿ ಸಯೀದ್ ವಾಜಿರ್ ಅವರು, ದಾಳಿ ಮಾಡಿದ ಗುಂಪಿನ ಪೈಕಿ ಈಗಾಗಲೇ ನಾಲ್ವರು ದಾಳಿಕೋರರನ್ನು ಹತ್ಯೆ ಮಾಡಲಾಗಿದೆ. ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಭದ್ರತಾ ಸಿಬ್ಬಂದಿಗಳು ವಿವಿಯ ಆವರಣವನ್ನು ತಲುಪಲು ಯತ್ನ ನಡೆಸುತ್ತಿದ್ದು, ಈಗಾಗಲೇ ಹಲವು ವಿದ್ಯಾರ್ಥಿಗಳನ್ನು ಭದ್ರತಾ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ವಿವಿಯೊಳಗೆ ಮತ್ತಷ್ಟು ಉಗ್ರರು ಅಡಗಿರುವುದಾಗಿ ತಿಳಿದುಬಂದಿದ್ದು, ವಿವಿಯ ಒಳಗೆ ಈಗಾಗಲೇ ಗುಂಡಿನ ಮೊರೆತದ ಶಬ್ಧ ಕೇಳಿಬರುತ್ತಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದ್ದಾರೆ.
ದಾಳಿಯ ಹೊಣೆಹೊತ್ತ ತೆಹ್ರೀಕ್ ಇ ತಾಲಿಬಾನ್
ತೆಹ್ರೀಕ್ ಇ ತಾಲಿಬಾನ್ ಉಗ್ರ ಸಂಘಟನೆ ಪಾಕ್ ವಿವಿ ಮೇಲಿನ ದಾಳಿಯ ಹೊಣೆ ಹೊತ್ತುಕೊಂಡಿದೆ. ಇಂದು ನಮ್ಮ ನಾಲ್ವರು ಆತ್ಮಹತ್ಯೆ ದಾಳಿಕೊರರು ಬಚಾಖಾನ್ ವಿವಿ ಮೇಲೆ ದಾಳಿ ಮಾಡಿದ್ದಾರೆ ಎಂದು ತೆಹ್ರೀಕ್ ಇ ತಾಲಿಬಾನ್ ಕಮಾಂಡರ್ ಉಮರ್ ಮನ್ಸೂರ್ ದೂರವಾಣಿ ಮೂಲಕ ಎಎಫ್ ಪಿ ಗೆ ತಿಳಿಸರುವುದಾಗಿ ವರದಿ ಮಾಡಲಾಗಿದೆ.
ಮಂಜಿನ ಮರೆಯಲ್ಲಿ ವಿವಿ ಪ್ರವೇಶ ಮಾಡಿದ ಉಗ್ರರು
ಇನ್ನು ವಿವಿ ಆವರಣದಲ್ಲಿ ದಟ್ಟ ಮಂಜು ಆವರಿಸಿರುವುದನ್ನೇ ತಮ್ಮ ದುಷ್ಕೃತ್ಯಕ್ಕೆ ಬಳಸಿಕೊಂಡ ಉಗ್ರರು ವಿದ್ಯಾರ್ಥಿಗಳ ನಡುವೆ ವಿವಿ ಪ್ರವೇಶದ್ವಾರವನ್ನು ಪ್ರವೇಶಿಸಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ದಟ್ಟ ಮಂಜು ಆವರಿಸಿದ್ದರಿಂದ ಉಗ್ರರು ಕಾಣಲಿಲಲ್ಲ ಎಂದು ವಿವಿಯ ಭದ್ರತಾ ಸಿಬ್ಬಂದಿಗಳು ತಿಳಿಸಿದ್ದಾರೆ. ಇನ್ನು ವಿವಿ ಪ್ರವೇಶಿಸಿರುವ ಉಗ್ರರು ಭಾರಿ ಪ್ರಮಾಣದಲ್ಲಿ ಮದ್ದು-ಗುಂಡುಗಳನ್ನು ಹೊತ್ತೊಯ್ದಿದ್ದಾರೆ ಎಂದು ಹೇಳಲಾಗುತ್ತಿದೆ.
2014ರಲ್ಲಿಯೂ ಇದೇ ಪಾಕಿಸ್ತಾನದ ಪೇಶಾವರದಲ್ಲಿ ಶಾಲೆಯ ಮೇಲೆ ಉಗ್ರರು ದಾಳಿ ನಡೆಸಿದ್ದರು. ಘಟನೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ 140 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com