ವೈದ್ಯಕೀಯ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ!

ಮುಂಬರುವ ಶೈಕ್ಷನಿಕ ವರ್ಷದಿಂದ ವೃತ್ತಿಪರ ಕೋರ್ಸ್ ನ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಕಲಿಯಬೇಕಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಂಬರುವ ಶೈಕ್ಷನಿಕ ವರ್ಷದಿಂದ ವೃತ್ತಿಪರ ಕೋರ್ಸ್ ನ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಕಲಿಯಬೇಕಿದೆ.

ಇಂಗ್ಲಿಷ್ ಪಠ್ಯ ಕಡ್ಡಾಯಗೊಳಿಸಿದಂತೆ ಕನ್ನಡ ಭಾಷಾ ಪಠ್ಯವನ್ನು ಸಹ ಕಡ್ಡಾಯಗೊಳಿಸಬೇಕು ಎಂದು ಹಂಪಿ ಕನ್ನಡ ವಿವಿಯ ಮಾಜಿ ಉಪಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ ನೇತೃತ್ವದ ಸಮಿತಿ ಶಿಫಾರಸು ಮಾಡಿತ್ತು. ಈ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಕಾನೂನು ವಿಭಾಗದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ತೀರ್ಮಾನಕ್ಕೆ ಬಂದಿದೆ.

ವೃತ್ತಿ ಶಿಕ್ಷಣದಲ್ಲಿ (ಇಂಜಿನಿಯರಿಂಗ್,  ವೈದ್ಯಕೀಯ, ಕಾನೂನು ಹಾಗೂ ಕೃಷಿ ಇತ್ಯಾದಿ  ವಿಭಾಗಗಳಲ್ಲಿ) ಕಡ್ಡಾಯವಾಗಿ ಕನ್ನಡ ಬೋಧಿಸುವ ಬಗ್ಗೆ ಸರ್ಕಾರಕ್ಕೆ ಸಲಹೆ ಹಾಗೂ ಶಿಫಾರಸು ನೀಡುವ ಸಂಬಂಧ ರಚಿಸಿದ್ದ ಬೋರಲಿಂಗಯ್ಯ ನೇತೃತ್ವದ ಸಮಿತಿಯು 10 ಪ್ರಮುಖ ಶಿಫಾರಸುಗಳನ್ನು ಮಾಡಿತ್ತು.

ಸಮಿತಿಯ ಪ್ರಮುಖ ಶಿಫಾರಸುಗಳು
* ರಾಜ್ಯದ ಸಾಮಾನ್ಯ ಸ್ವರೂಪದ ಸಾಂಪ್ರದಾಯಿಕ ವಿವಿಗಳು, ವೃತ್ತಿಪರ ಕೋರ್ಸ್‌ನ ಎಲ್ಲಾ ಬಗೆಯ ವಿವಿಗಳು ಸೇರಿದಂತೆ ಬೋಧನಾ ವ್ಯವಸ್ಥೆ ಇರುವ ಎಲ್ಲಾ ಕಡೆ ಕನ್ನಡ ಭಾಷಾ ಬೋಧನೆ ಕಡ್ಡಾಯಗೊಳಿಸಬೇಕು.

* ಪದವಿಪೂರ್ವ ಶಿಕ್ಷಣ ಹಂತದಿಂದ ಬಂದವರಿಗೆ ವೃತ್ತಿ ಶಿಕ್ಷಣದಲ್ಲಿ ಒಂದರಿಂದ ನಾಲ್ಕನೇ ಸೆಮಿಸ್ಟರ್‌ವರೆಗೆ ಕಡ್ಡಾಯವಾಗಿ ಕನ್ನಡ ಬೋಧಿಸಬೇಕು. ಪದವಿ ಮುಗಿಸಿ ಮೂರು ವರ್ಷದ ಎಲ್‌ಎಲ್‌ಬಿ ಪ್ರವೇಶಿಸುವವರಿಗೆ ಎರಡು ಸೆಮಿಸ್ಟರ್‌ ಮತ್ತು ಐದು ವರ್ಷದ ಎಲ್‌ಎಲ್‌ಬಿ ಪ್ರವೇಶಿಸುವವರಿಗೆ ನಾಲ್ಕು ಸೆಮಿಸ್ಟರ್‌ ಕನ್ನಡ ಕಲಿಕೆ ಕಡ್ಡಾಯವಾಗಬೇಕು.

* ಕನ್ನಡ ಭಾಷೆಯ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕನ್ನಡದ ಜತೆಗೆ ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ತಿಳಿಸುವ ಕ್ರಿಯಾತ್ಮಕ ಕನ್ನಡ ಬೋಧಿಸಬೇಕು. ತಾಂತ್ರಿಕ ವಿಷಯಗಳ ಕುರಿತು ಕನ್ನಡ ಪಠ್ಯ ರೂಪಿಸಬೇಕು.

* ಕನ್ನಡೇತರ ವಿದ್ಯಾರ್ಥಿಗಳಿಗೆ ಸಾಮಾನ್ಯ ಸ್ವರೂಪದ ಸರಳ ಕನ್ನಡ ಪಠ್ಯ ರೂಪಿಸಬೇಕು. ಅವರಿಗೆ ಕನ್ನಡ ಸಂಸ್ಕೃತಿ ಪರಿಚಯಿಸುವ ಮೂಲಕ ಕನ್ನಡ ಮತ್ತು ಆ ವಿದ್ಯಾರ್ಥಿಗಳ ಮಾತೃಭಾಷೆಯ ನಡುವೆ ಜೀವನಾತ್ಮಕ ಸಂಬಂಧ ಬೆಳೆಯುವಂತೆ ಮಾಡಬೇಕು.

* ಕನ್ನಡ ಮತ್ತು ಕನ್ನಡೇತರ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಪಠ್ಯಕ್ರಮಗಳನ್ನು ಸಿದ್ಧಪಡಿಸಬೇಕು. ಆದರೆ, ಈ ಪಠ್ಯಕ್ರಮದ ಶೇ.50 ಭಾಗ ಎಲ್ಲಾ ವಿವಿಗಳಲ್ಲೂ ಏಕರೂಪದಲ್ಲಿರಬೇಕು. ಉಳಿದ ಶೇ. 50 ಭಾಗ ವಿವಿಗಳ ಕೇಂದ್ರ ಸ್ಥಾನ ಇರುವ ಪ್ರದೇಶದ ಸ್ಥಳೀಯ ಭಾಷಾ ಪ್ರಭೇದಗಳಿಗೆ (ಧಾರವಾಡ ಕನ್ನಡ, ಕರಾವಳಿ ಕನ್ನಡ, ಕಲಬುರಗಿ ಕನ್ನಡ, ಮಂಡ್ಯ ಮತ್ತು ಚಾಮರಾಜನಗರ ಕನ್ನಡ ಇತ್ಯಾದಿ) ಹತ್ತಿರವಾಗಿರಬೇಕು.

* ಮೇಲಿನ ಮಾನದಂಡಗಳಡಿ ಸೂಕ್ತ ಪಠ್ಯಕ್ರಮ ರಚಿಸಲು ಪ್ರತಿ ವಿವಿಯಲ್ಲಿ ಉಪಸಮಿತಿ ರಚಿಸಿಕೊಳ್ಳಬೇಕು. ಈ ಸಮಿತಿಗೆ ಭಾಷಾ ತಜ್ಞರು, ವಿಷಯ ತಜ್ಞರನ್ನು ನೇಮಿಸಬೇಕು. ಈ ಸಮಿತಿ ರಚಿಸಿದ ಪಠ್ಯಕ್ರಮವನ್ನು ಅಧ್ಯಯನ ಮಂಡಳಿಗಳಲ್ಲಿಟ್ಟು ಅಧಿಕೃತಗೊಳಿಸಬೇಕು.

* ಈ ಚಟುವಟಿಕೆಗಳನ್ನು ವಿವಿಗಳು ಗಂಭೀರವಾಗಿ ಪರಿಗಣಿಸಿ ಮುಂಬರುವ ಶೈಕ್ಷಣಿಕ ವರ್ಷ ಆರಂಭವಾಗುವುದರೊಳಗೆ ಪಠ್ಯ ಸಿದ್ಧತೆ ಪೂರ್ಣಗೊಳಿಸಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕಡ್ಡಾಯವಾಗಿ ಜಾರಿಗೊಳಿಸಬೇಕು.

* ಕನ್ನಡ ಮಾತೃಭಾಷಾ ವಿದ್ಯಾರ್ಥಿಗಳಿಗೆ ಕನ್ನಡ ಬೋಧಿಸಲು ಅರ್ಹ ಕನ್ನಡ ಅಧ್ಯಾಪಕರನ್ನು ವಿವಿಗಳು ನೇಮಿಸಿಕೊಳ್ಳಬೇಕು. ಕನ್ನಡೇತರ ವಿದ್ಯಾರ್ಥಿಗಳಿಗೆ ಕನ್ನಡ ಬೋಧಿಸಲು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪರಿಣತಿ ಪಡೆದ ಅರ್ಹ ಅಧ್ಯಾಪಕರನ್ನು ನೇಮಿಸಬೇಕು.

* ವಿವಿಗಳ ಒಟ್ಟು ಅನುದಾನದಲ್ಲಿ ಕನ್ನಡ ಬೋಧನೆ, ಕನ್ನಡ ಪಠ್ಯ ರಚನೆ, ಕನ್ನಡ ಅಭಿವೃದ್ಧಿಗಾಗಿ ವಾರ್ಷಿಕ ಆಯವ್ಯಯದಲ್ಲಿ ಕಾಯ್ದಿರಿಸಿ ವಿನಿಯೋಗಿಸಲು ಅನುವು ಮಾಡಿಕೊಡಬೇಕು.

* ಕನ್ನಡ ಭಾಷೆಗೆ ಪರ್ಯಾಯವಾಗಿ ಯಾವುದಾದರೂ ಭಾರತೀಯ ಭಾಷೆ ತೆಗೆದುಕೊಳ್ಳಬಹುದು ಎಂಬ ಪ್ರಸ್ತುತ ಪದವಿ ಕಾಲೇಜುಗಳಲ್ಲಿ ಜಾರಿಯಲ್ಲಿರುವ, ಅನಪೇಕ್ಷಿತ ಪರ್ಯಾಯ ಮಾರ್ಗಕ್ಕೆ ದಾರಿ ಮಾಡಿಕೊಡುವ ಉದಾರ ನೀತಿ ಕೈಬಿಡಬೇಕು. ಪದವಿ ಕಾಲೇಜುಗಳಲ್ಲಿ ಇಂಗ್ಲಿಷ್‌ ಕಡ್ಡಾಯಗೊಳಿಸಿದ ಮಾದರಿಯಲ್ಲಿ ಕನ್ನಡ ಪಠ್ಯವನ್ನೂ ಕಡ್ಡಾಯಗೊಳಿಸಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com