ಪಠಾಣ್ ಕೋಟ್ ಉಗ್ರ ದಾಳಿ: ಹೊಣೆ ಹೊತ್ತ ಹಿಜ್ಬುಲ್ ಸಂಘಟನೆ

ಮಹತ್ವದ ಬೆಳವಣಿಗೆಯೊಂದರಲ್ಲಿ ಪಂಜಾಬ್ ಪಠಾಣ್ ಕೋಟ್ ಸೇನಾ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿ ಪ್ರಕರಣದ ಹೊಣೆಯನ್ನು ಪಾಕಿಸ್ತಾನ ಮೂಲದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಹೊತ್ತುಕೊಂಡಿದೆ...
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮುಖ್ಯಸ್ಥ ಸಯ್ಯದ್ ಸಲಾವುದ್ದೀನ್ (ಸಂಗ್ರಹ ಚಿತ್ರ)
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮುಖ್ಯಸ್ಥ ಸಯ್ಯದ್ ಸಲಾವುದ್ದೀನ್ (ಸಂಗ್ರಹ ಚಿತ್ರ)

ಇಸ್ಲಾಮಾಬಾದ್: ಮಹತ್ವದ ಬೆಳವಣಿಗೆಯೊಂದರಲ್ಲಿ ಪಂಜಾಬ್ ಪಠಾಣ್ ಕೋಟ್ ಸೇನಾ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿ ಪ್ರಕರಣದ ಹೊಣೆಯನ್ನು ಪಾಕಿಸ್ತಾನ ಮೂಲದ  ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಹೊತ್ತುಕೊಂಡಿದೆ.

ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿ ಭಾರತೀಯ ಸೇನೆ ಮೇಲಿನ ತಮ್ಮ ದಾಳಿ ಮುಂದುವರೆದೆ ಭಾಗವಾಗಿದೆ ಎಂದು ಹಿಜ್ಬುಲ್ ಸಂಘಟನೆಯ ಮುಖ್ಯಸ್ಥ ಸಯ್ಯದ್ ಸಲಾವುದ್ದೀನ್  ಹೇಳಿಕೊಂಡಿದ್ದಾನೆ. ಪಾಕಿಸ್ತಾನ ಮೂಲದ ಉರ್ದು ಪತ್ರಿಕೆಗೆ ಸಂದರ್ಶನ ನೀಡಿರುವ ಸಲಾವುದ್ದೀನ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದು, ಭಾರತದ ವಿರುದ್ಧ ತಮ್ಮ ದಾಳಿಗಳಿಗೂ, ಪಾಕಿಸ್ತಾನ  ಹಾಗೂ ಭಾರತದ ನಡುವಿನ ಮಾತುಕತೆಗೂ ಯಾವುದೇ ಸಂಬಂಧವಿಲ್ಲ. ಈ ದಾಳಿಯ ಹೊಣೆ ಹೊರುವುದರಿಂದ ಪಾಕಿಸ್ತಾನದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂಬ ವಾದವನ್ನು ಕೂಡ  ತಳ್ಳಿಹಾಕಿದ್ದಾನೆ.

"ನೀವು ಏಕಕಾಲಕ್ಕೆ ಕೊಲೆಗಾರನ ಮತ್ತು ಕೊಲೆಯಾದವನ ಆಪ್ತನಾಗಲು ಸಾಧ್ಯವಿಲ್ಲ" ಎಂದು ಹೇಳುವ ಮೂಲಕ ನೇರವಾಗಿಯೇ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ನೀತಿಯನ್ನು  ಟೀಕಿಸಿದ್ದಾನೆ. ಅಲ್ಲದೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸೌಹಾರ್ಧ ಮಾತುಕತೆಯನ್ನು ಹಾಳುಗೆಡವಲೆಂದೇ ಈ ದಾಳಿಯನ್ನು ನಡೆಸಲಾಗಿದೆ ಎಂಬ ವಾದ ನೂರಕ್ಕೆ ನೂರರಷ್ಟು ತಪ್ಪು. ಕಳೆದ 26 ವರ್ಷಗಳಿಂದ ಭಾರತದ 8 ಲಕ್ಷ ಸೈನಿಕರ ವಿರುದ್ಧ ಹಿಜ್ಬುಲ್ ಸಂಘಟನೆಯ ಶಸ್ತ್ರಧಾರಿಗಳು ಹೋರಾಟ ನಡೆಸುತ್ತಿದ್ದಾರೆ. ಪಠಾಣ್ ಕೋಟ್ ದಾಳಿ ಇದರ ಮುಂದುವರೆದ ಭಾಗವಷ್ಟೇ.  ಎಂದಿದ್ದಾನೆ.

ಮತ್ತೆ ಕಾಶ್ಮೀರ ವಿವಾದ ಕೆದಕಿದ ಸಲಾವುದ್ದೀನ್
ಇದೇ ವೇಳೆ ಮತ್ತೆ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಬೇಕು ಎಂದು ಆಗ್ರಹಿಸಿದ ಸಲಾವುದ್ದೀನ್, ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳ ನಡುವೆ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಸುಮಾರು 150ಕ್ಕೂ ಹೆಚ್ಚು ಬಾರಿ ಚರ್ಚೆಗಳು ನಡೆದಿವೆ. ಆದರೂ ಈ ವಿವಾದ ಸಂಬಂಧ ಯಾವುದೇ ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಕಾಶ್ಮೀರ ವಿವಾದವನ್ನು ಭಾರತ ಬೇಕೆಂದೇ ನಿಧಾನಗೊಳಿಸುತ್ತಿದೆ. ಈ ಸಮಯದಲ್ಲಿ ತನ್ನ ಮಿಲಿಟರಿಯನ್ನು ಕಾಶ್ಮೀರ ಪ್ರದೇಶದಲ್ಲಿ ಭದ್ರ ಪಡಿಸಿಕೊಳ್ಳುತ್ತಿದೆ. ಆ ಮೂಲಕ ಅಲ್ಲಿ ಹಿಡಿತ ಸಾಧಿಸಲು ಹುನ್ನಾರ ನಡೆಸುತ್ತಿದೆ. ಈ ವಿಚಾರ ಅಂತಾರಾಷ್ಟ್ರೀಯ ಸಮುದಾಯಕ್ಕೆ ತಿಳಿದಿಲ್ಲ. ಹೀಗಾಗಿ ಭಾರತದೊಂದಿಗೆ ಚರ್ಚಿಸುವ ವ್ಯರ್ಥ ಎಂದು ಹೇಳಿದ್ದಾನೆ.

ಸಲಾವುದ್ದೀನ್ ಹೇಳಿಕೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರಿಯ ತನಿಖಾ ದಳ ತನಿಖೆಯನ್ನು ತೀವ್ರಗೊಳಿಸಿದ್ದು,  ನಿನ್ನೆಯಷ್ಟೇ ಪಂಜಾಬ್ ಎಸ್ ಪಿ ಸಲ್ವಿಂದರ್ ಸಿಂಗ್ ಅವರ ಮನೆ ಹಾಗೂ ಕಚೇರಿಗಳಲ್ಲಿ ಶೋಧ ನಡೆಸಿತ್ತು. ಸಲ್ವಿಂದರ್ ಸಿಂಗ್ ಅವರಿಗೆ ಸೇರಿದ ಒಟ್ಟು ಆರು ಪ್ರದೇಶಗಳಲ್ಲಿ ಅಧಿಕಾರಿಗಳು  ಶೋಧ ಕಾರ್ಯ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com