
ಬೆಂಗಳೂರು: ಮೂರು ವರ್ಷದ ಹಿಂದೆ ಜಾಫರ್ ಷರೀಫ್ ಏನು ಮಾಡಿದ್ದರೆಂಬುದು ಗೊತ್ತೇ ಇದೆ. ಅವರೊಂದಿಗಿನ ಆ ಅನುಭವವೇ ಸಾಕು. ಜಾತ್ಯತೀತತೆ ಬಗ್ಗೆ ಅವರಿಂದ ನನಗೇನೂ ಸರ್ಟಿಫಿಕೇಟ್ ಬೇಕಾಗಿಲ್ಲ...'
ಹೀಗೆ ಕಾಂಗ್ರೆಸ್ ನ ಹಿರಿಯ ನಾಯಕ ಸಿ.ಕೆ.ಜಾಫರ್ ಷರೀಫ್ ವಿರುದ್ಧ ತೀಕ್ಷ್ಣ ವಾಗಿ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಷರೀಫ್ ಮಾತು ಕೇಳಿ ಪಕ್ಷದ ಘೋಷಿತ ಅಭ್ಯರ್ಥಿಗೆ ದ್ರೋಹ ಮಾಡಲಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಹೆಬ್ಬಾಳ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಇಸ್ಮಾಯಿಲ್ ಷರೀಫ್ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಾಫರ್ ಷರೀಫ್ ಮಂಗಳವಾರ ರಾತ್ರಿ ದೂರವಾಣಿ ಕರೆ ಮಾಡಿ ತಮ್ಮ ಮೊಮ್ಮಗನಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ನೀವು ಸಹಕಾರ ಕೊಡಿ ಎಂದು ಕೋರಿದರು. ಅಲ್ಪಸಂಖ್ಯಾತರನ್ನು ಹೊರತಾದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಮಾತನಾಡಿದರು. ಷರೀಫ್ ಈ ಕೋರಿಕೆಯನ್ನು ತಿರಸ್ಕರಿಸಿದ ನಾನು ಪಕ್ಷ ಈಗಾಗಲೇ ಅಭ್ಯರ್ಥಿ ಘೋಷಣೆ ಮಾಡಿದೆ. ಪಕ್ಷದ ಅಭ್ಯರ್ಥಿಯ ಬೆನ್ನಿಗೆ ಚೂರಿ ಹಾಕುವ ಕೆಲಸ ನಾನು ಮಾಡಲಾರೆ ಎಂದು ಸ್ಪಷ್ಟವಾಗಿ ಹೇಳಿದೆ ಎಂದರು.
ದೇವೇಗೌಡರು ಜಾತ್ಯತೀತರಲ್ಲ, ಅವರ ಪಕ್ಷ ಜಾತ್ಯಾತೀತವಲ್ಲ ಎಂಬ ಷರೀಫ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಷರೀಫ್ ರಿಂದ ನನಗೆ ಜಾತ್ಯತೀತತೆಯ ಪ್ರಮಾಣ ಪತ್ರ ಬೇಕಾಗಿಲ್ಲ. ಪ್ರಧಾನಿಯಾಗಿ ಅಲ್ಪಸಂಖ್ಯಾತರೊಂದಿಗೆ ಯಾವ್ಯಾವ ಸಮುದಾಯದವರೊಂದಿಗೆ ಹೇಗೆ ನಡೆದುಕೊಂಡಿದ್ದೇನೆ. ನನ್ನ ಜಾತ್ಯತೀತತೆಯ ಗುಣ ಮೌಲ್ಯಗಳೇನು ಎಂಬುದನ್ನು ಜನ ನಿರ್ಧರಿಸುತ್ತಾರೆ ಎಂದು ಹೇಳಿದರು.
ಶಾಸಕ ಜಮೀರ್ ಅಹಮ್ಮದ್ ಬುಧವಾರ ಬೆಳಗ್ಗೆ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಗೌಡರು ಮೂರು ಕ್ಷೇತ್ರಗಳ ಆಯ್ಕೆ ಪಕ್ಷದ ಸರ್ವಾನುಮತದ ನಿರ್ಧಾರ. ಎಲ್ಲರೊಂದಿಗೂ ಚರ್ಚಿಸಿ ಆಯ್ಕೆ ಮಾಡಲಾಗಿದೆ. ಹೆಬ್ಬಾಳ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಮಾತ್ರ ನಾನು ಹಾಜರರಿಲು ಕಾರಣ ಪಕ್ಷದ ಆಯ್ಕೆಗೆ ಬದ್ಧವಾಗಿರುವುದನ್ನು ಸೂಚಿಸುತ್ತದೆಯೇ ಹೊರತು ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಜೆಡಿಎಸ್ ಅಭ್ಯರ್ಥಿ ಆಯ್ಕೆಯಿಂದ ಬಿಜೆಪಿಗೆ ಲಾಬವಾಗುವುದಿಲ್ಲವೆಂದು ದೇವೇಗೌಡ ಅಭಿಪ್ರಾಯಪಟ್ಟರು.
ಸಿಎಂ ಸಿದ್ಧತೆ
ತಾಪಂ, ಜಿಪಂ ಚುನಾವಣೆಗೆ ಸ್ವಂತ ಜಿಲ್ಲೆಯಿಂದಲೇ ರಣ ಕಹಳೆ ಊದಿ ವಿಜಯದುಂದುಬಿ ಆಚರಿಸಬೇಕೆಂಬ ನಿರ್ಧಾ ಬಂದಿರುವ ಸಿದ್ದರಾಮಯ್ಯ ಬುಧವಾರ ಮೈಸೂರು ಕಂದಾಯ ವಿಭಾಗದ 8 ಜಿಲ್ಲೆಗಳ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿದರು. ಫೆ.6ರಂದು ಮೈಸೂರಿನಲ್ಲಿ ಸಮಾವೇಶ ಏರ್ಪಡಿಸಿ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.
Advertisement