ಕಟ್ಟಡ ಸ್ವಾಧೀನಾನುಭವ ಪತ್ರ ರದ್ದಿಗೆ ಆದೇಶ

ಅಗ್ನಿ ಸುರಕ್ಷತಾ ಕ್ರಮ ಅಳವಡಿಸದೆ ಬಿಬಿಎಂಪಿ ವ್ಯಾಪ್ತಿಯ ಬಹುಮಹಡಿ ಕಟ್ಟಡಗಳ ಸ್ವಾಧೀನಾನುಭವ ಪತ್ರವನ್ನು ತಕ್ಷಣ ರದ್ದುಪಡಿಸುವಂತೆ ಮೇಯರ್ ಬಿ.ಎನ್.ಮಂಜುನಾಥರೆಡ್ಡಿ ಆಯುಕ್ತರಿಗೆ ಆದೇಶಿಸಿದರು...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)
Updated on

ಬೆಂಗಳೂರು: ಅಗ್ನಿ ಸುರಕ್ಷತಾ ಕ್ರಮ ಅಳವಡಿಸದೆ ಬಿಬಿಎಂಪಿ ವ್ಯಾಪ್ತಿಯ ಬಹುಮಹಡಿ ಕಟ್ಟಡಗಳ ಸ್ವಾಧೀನಾನುಭವ ಪತ್ರವನ್ನು ತಕ್ಷಣ ರದ್ದುಪಡಿಸುವಂತೆ ಮೇಯರ್ ಬಿ.ಎನ್.ಮಂಜುನಾಥರೆಡ್ಡಿ ಆಯುಕ್ತರಿಗೆ ಆದೇಶಿಸಿದರು.

ಬೆಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ನಗರದ 150 ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ಅವಘಡ ಸುರಕ್ಷತೆ ದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳನ್ನು ಅಳವಡಿಸಿಕೊಂಡಿಲ್ಲ. ಪ್ರತಿ ಬಹುಮಹಡಿ ಕಟ್ಟಡದ ಬೇಸ್ ಮೆಂಟ್ ನಲ್ಲಿ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಬೇಕು. ಇದರಿಂದ ಅಗ್ನಿ ಅವಘಡ ಸಂಭವಿಸಿದಾಗ ಅಗ್ನಿಶಾಮಕ ದಳದ ವಾಹನಗಳು ಸುಲಭವಾಗಿ ಕಟ್ಟಡ ಪ್ರವೇಶಿಸಲು ಅನುವಾಗುತ್ತದೆ ಎಂದರು.

ಬಹುತೇಕ ಕಟ್ಟಡಗಳಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಹೀಗಾಗಿ ಅವಘಡ ಸಂಭವಿಸಿದಾಗ ಆಸ್ತಿ ನಷ್ಟದೊಂದಿಗೆ ಜೀವಹಾನಿ ಸಂಭವಿಸುವ ಸಾಧ್ಯತೆಗಳಿರುತ್ತದೆ. ಕಾರ್ಲ್ ಟನ್ ಟವರ್, ಯುಬಿ ಸಿಟಿ ಕಟ್ಟಡ ಸೇರಿ ಹಲವು ಕಟ್ಟಗಳಲ್ಲಿ ಆಗ್ನಿ ಸುರಕ್ಷತಾ ಕ್ರಮ ಅಳವಡಿಸಿಲ್ಲ. ಈ ಕುರಿತು ಹಿಂದಿನ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಪಾಲಿಕೆಗೆ ಪತ್ರ ಬರೆದಿದ್ದರು. ಆದರೂ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಸದಸ್ಯ ಉಮೇಶ್ ಶೆಟ್ಟಿ ಆರೋಪಿಸಿದರು.

ಇದಕ್ಕೆ ಉತ್ತರಿಸಿದ ಮೇಯರ್, ಬಹುಮಹಡಿ ಕಟ್ಟಡಗಳಲ್ಲಿ ಸುರಕ್ಷತಾ ಕ್ರಮಗಳ ಬಗೆಗಿನ ನಿರ್ಲಕ್ಷ್ಯ ನಮ್ಮ ಗಮನಕ್ಕೂ ಬಂದಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಯಾವ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತೆಗೆ ಕ್ರಮ ಕೈಗೊಂಡಿಲ್ಲ ಎಂಬುದನ್ನು ಪರಿಶೀಲಿಸಿ ಅಂತಹ ಕಟ್ಟಡಗಳ ಸ್ವಾಧೀನಾನುಭವ ಪತ್ರ ರದ್ದು ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು. ಹಾಗೇ, ಸ್ವಾಧೀನಾನುಭವ ಪತ್ರ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಸೂಚನೆ ನೀಡಿದರು.

ಬಸ್ ನಿಲ್ದಾಣ ಗುದ್ದಾಟ
ನಗರದ ಕೆ.ಆರ್.ಪುರ ವಾರ್ಡ್ ನ ಐಟಿಐ ಗೇಟ್ ಬಳಿ ಅಖಿಲ ಕರ್ನಾಟಕ ರೈತರು ಮತ್ತು ವ್ಯಾಪಾರಿಗಳ ಒಕ್ಕೂಟದಿಂದ ನಿರ್ಮಿಸಿರುವ ತಂಗುದಾಣದಲ್ಲಿ 14 ಅಂಗಡಿಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಹೀಗಾಗಿ ಅಂಗಡಿಗಳನ್ನು ಕೂಡಲೇ ತೆರವು ಮಾಡಬೇಕು ಎಂದು ಬಿಜೆಪಿ ಸದಸ್ಯೆ ಪೂರ್ಣಿಮಾ ಆಗ್ರಹಿಸಿದರು. ಇದಕ್ಕೆ ಸ್ಥಳೀಯ ಶಾಸಕರ ಬೆಂಬಲವಿದ್ದು, ಫುಟ್ ಪಾತ್ ಒತ್ತುವರಿ ತೆರವು ಮಾಡದಿದ್ದರೆ ಕೆ.ಆರ್.ಪುರ ವಾರ್ಡ್ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದರು. ಅದಕ್ಕೆ ಕೆ.ಆರ್.ಪುರ ಕ್ಷೇತ್ರದ ಕಾಂಗ್ರೆಸ್ ಸದಸ್ಯ ಆಕ್ಷೇಪ ವ್ಯಕ್ತಪಡಿಸಿದರು. ಅಂಗಡಿ ನಿರ್ಮಿಸಿರುವುದು ಐಟಿಐಗೆ ಸೇರಿದ ಸ್ಥಳದಲ್ಲಿ. ಈ ಕುರಿತು ಮೇಯರ್ ಮತ್ತು ಆಯುಕ್ತರು ಪರಿಶೀಲನೆ ನಡೆಸುವಂತೆ ತಿಳಿಸಿದರು. ಅದಕ್ಕೆ ಮೇಯರ್, ಶೀಘ್ರದಲ್ಲಿ ಈ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಮಾತನಾಡೋದು ಕಲಿಯಿರಿ
ಪೂರ್ಣಿಮಾ ಅವರು ಕೆ.ಆರ್.ಪುರ ಬಂದ್ ಮಾಡಿಸಿದರೆ, ನಮಗೆ ಇಡೀ ಬೆಂಗಳೂರು ಬಂದ್ ಮಾಡಿಸುವ ಸಾಮರ್ಥ್ಯ ಇದೆ ಎಂದು ಈ ವೇಳೆ ಕಾಂಗ್ರೆಸ್ ಸದಸ್ಯ ಶ್ರೀಕಾಂತ್ ಹೇಳಿದರು. ಈ ವೇಳೆ ಗರಂ ಆದ ಮೇಯರ್ ಮಂಜುನಾಥರೆಡ್ಡಿ, ಸಭೆಯಲ್ಲಿ ಹೇಗೆ ಮಾತನಾಡಬೇಕು ಎಂಬುದನ್ನ ಮೊದಲು ಕಲಿಯಿರಿ. ಹೊಸದಾಗಿ ಪಾಲಿಕೆಗೆ ಬಂದಿದ್ದೀರಿ. ಧಮ್ಕಿ ಹಾಕುವ ಪ್ರವೃತ್ತಿ ಬಿಡಿ ಎಂದು ತರಾಟೆಗೆ ತೆಗೆದುಕೊಂಡರು.

ಮಧ್ಯಪ್ರವೇಶವಿಲ್ಲ
ಬಿಜೆಪಿ ಸದಸ್ಯ ಉಮೇಶ್ ಶೆಟ್ಟಿ ಮಾತನಾಡಿ, ಕೆಂಪೇಗೌಡರ ಸಮಾಧಿ ಸ್ಥಳ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಅದರ ಬದಲು ಬಿಬಿಎಂಪಿಯಿಂದಲೇ ಅಭಿವೃದ್ಧಿ ಪಡಿಸಬೇಕು ಎಂದು ಸಲಹೆ ನೀಡಿದರು. ಮೇಯರ್ ಮಂಜುನಾಥರೆಡ್ಡಿ ಪ್ರತಿಕ್ರಿಯಿಸಿ, ಸಮಾಧಿ ಅಭಿವೃದ್ಧಿಗೆ ಪುರಾತತ್ವ ಇಲಾಖೆಗೆ ರಾಜ್ಯ ಸರ್ಕಾರ ರು.2.36 ಕೋಟಿ ನೀಡಿದೆ. ಕಂದಾಯ ಇಲಾಖೆ ಸಮಾಧಿ ಸುತ್ತ 4 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಈ ಪ್ರದೇಶದಲ್ಲಿ ಉದ್ಯಾನವನ, ಕೆಂಪೇಗೌಡರ ಕುರಿತ ಪುಸ್ತಕಗಳಿರುವ ಗ್ರಂಥಾಲಯ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಹೀಗಿರುವಾಗ ಪಾಲಿಕೆ ಮಧ್ಯ ಪ್ರವೇಶಿಸುವುದು ಸರಿಯಲ್ಲ ಎಂದರು.

ಪಾರ್ಕ್ ನಿರ್ವಹಣೆಗೆ ಆಗ್ರಹ
ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಆರ್.ಎಸ್.ಸತ್ಯ ನಾರಾಯಣ ಮಾತನಾಡಿ, ಬಿಬಿಎಂಪಿ ಉದ್ಯಾನವನಗಳು ನಿರ್ವಹಣೆ ಇಲ್ಲದೆ ಸೊರಗುತ್ತಿವೆ. ಪ್ರತಿ ವಾರ್ಡ್ ಗಳಲ್ಲಿ 7ರಿಂದ 8 ಉದ್ಯಾನಗಳಿದ್ದು, ಗುತ್ತಿಗೆದಾರರಿಗೆ ಬಾಕಿ ನೀಡದ ಕಾರಣ ನಿರ್ವಹಣೆಯಾಗುತ್ತಿಲ್ಲ ಎಂದು ದೂರಿದರು. ಈ ವೇಳೆ ಎಲ್ಲ ಸದಸ್ಯರು ದನಿಗೂಡಿಸಿದರು. ಉದ್ಯಾನಗಳಿಗೆ ನೀರುಣಿಸಲು ಅಗತ್ಯವಿರುವ ಕಡೆ ಬೋರ್ ವೆಲ್ ಕೊಲೆಸಲು ಆದೇಶ ನೀಡಲಾಗಿದೆ ಎಂದ ಮೇಯರ್, ಗುತ್ತಿಗೆದಾರರಿಗೆ ಶೀಘ್ರವೇ ಬಾಕಿ ಪಾವತಿಸುವಂತೆ ಹಣಕಾಸು ವಿಭಾಗಕ್ಕೆ ಆದೇಶಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com