
ನವದೆಹಲಿ: ಕಳೆದ ತಿಂಗಳಾಂತ್ಯದಲ್ಲಿ ಕಾಶ್ಮೀರದ ಪ್ಯಾಂಪೋರ್ ನಲ್ಲಿ ಸೇನಾ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದ ಉಗ್ರರು ಅಸಲಿಗೆ ಭಾರತದ ಒಳಗೆ ನುಸುಳಿದ್ದೇ ಸಾವಿರಾರು ಯಾತ್ರಾರ್ಥಿಗಳು ಪಾಲ್ಗೊಳ್ಳುವ ಅಮರನಾಥ ಯಾತ್ರೆಯನ್ನು ಭಂಗಗೊಳಿಸಲಂತೆ.
ಇಂತಹುದೊಂದು ಸ್ಫೋಟಕ ಮಾಹಿತಿ ನೀಡಿರುವುದು ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು. ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ ಐ ನಿಂದ ತರಬೇತಿ ಪಡೆದ ಸುಮಾರು 300 ಲಷ್ಕರ್ ಇ ತೊಯ್ಬಾ ಉಗ್ರರು ಅಮರನಾಥ ಯಾತ್ರೆಯನ್ನು ಹಾಳುಗೆಡವಲು ಭಾರತದ ಗಡಿಯೊಳಗೆ ನುಸುಳಿದ್ದಾರಂತೆ. ಕಾಶ್ಮೀರದಿಂದ ಅಮರನಾಥಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಮೂಲಕ ಯಾತ್ರೆಗೆ ಅಡ್ಡಿ ಪಡಿಸುವುದು ಅವರ ಪ್ರಮುಖ ಗುರಿಯಾಗಿದೆಯಂತೆ. ಇದೇ ಕಾರಣಕ್ಕಾಗಿ ಪ್ಯಾಂಪೋರ್ ನಲ್ಲಿ ಶೂಟಿಂಗ್ ತರಬೇತಿ ಮುಗಿಸಿ ವಾಪಸಾಗುತ್ತಿದ್ದ ಯೋಧರ ವಾಹನಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಮರನಾಥ ಯಾತ್ರೆ ಮೇಲೆ ಉಗ್ರರ ದಾಳಿ ಕುರಿತು ಒಂದು ತಿಂಗಳ ಹಿಂದೆಯೇ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು. ಹೀಗಾಗಿ ಅಮರನಾಥ ಯಾತ್ರೆಗೆ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಗಳೊಂದಿಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಬೀಡು
ಇನ್ನು ಮೂಲಗಳು ತಿಳಿಸಿರುವಂತೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರಿಗೆ ನೆಲೆ ಕಲ್ಪಿಸಲಾಗಿದ್ದು, ಅವಕಾಶ ಸಿಕ್ಕಾಗ ಭಾರತದ ಗಡಿ ಪ್ರವೇಶಿಸಿ ದಾಳಿ ಮಾಡುವಂತೆ ಫಿದಾಯಿನ್ ಉಗ್ರರಿಗೆ ಸೂಚನೆ ನೀಡಲಾಗಿದೆ. ಇನ್ನು ಕಾಶ್ಮೀರದ ಅನಂತ್ ನಾಗ್ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿಯೂ ಕೆಲ ಉಗ್ರರು ಅವಿತಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಈ ಪ್ರದೇಶಗಳಿಂದ ಪಾಕಿಸ್ತಾನಕ್ಕೆ ಕರೆಗಳು ಹೋದ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ. ಸುಮಾರು 300 ಉಗ್ರರನ್ನು ಹಲವು ತಂಡಗಳಾಗಿ ವಿಭಾಗಿಸಲಾಗಿದ್ದು, ಪ್ರತಿ ಗುಂಪಿನಲ್ಲೂ 25ರಿಂದ 30 ಉಗ್ರರನ್ನು ವಿಂಗಡಿಸಲಾಗಿದೆ. ನಿಕಿಯಾಲ್ ಮತ್ತು ಸೆನ್ಸಾ ಪ್ರದೇಶದಲ್ಲಿ ಈ ಗುಂಪುಗಳನ್ನು ನಿಯೋಜಿಸಲಾಗಿದೆಯಂತೆ.
ಉಗ್ರರಿಗಾಗಿ ವ್ಯಾಪಕ ಶೋಧ
ಇನ್ನು ಭಾರತದ ಗಡಿ ಪ್ರದೇಶದಲ್ಲಿ ಅವಿತಿರುವ ಉಗ್ರರಿಗಾಗಿ ಭಾರತೀಯ ಸೇನೆಯ ಯೋಧರು ವ್ಯಾಪಕ ಶೋಧ ನಡೆಸುತ್ತಿದ್ದು, ಕೋಕರ್ ನಾಗ್, ಅನಂತ್ ನಾಗ್ ಜಿಲ್ಲೆಯ ಗೋರಿವನ್ ಬಿಜಿಬೆಹರಾದಲ್ಲಿ ಸೈನಿಕರು ಶೋಧ ನಡೆಸುತ್ತಿದ್ದಾರೆ. ಈ ಎಲ್ಲ ಪ್ರದೇಶಗಳು ಅಮರನಾಥ ಯಾತ್ರೆಯ ಪ್ರಮುಖ ಪ್ರದೇಶವಾದ ಪೆಹಲ್ ಗಾಮ್ ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಪ್ರದೇಶಗಳಾಗಿದ್ದು, ಇಲ್ಲಿಗೆ ಸಮೀಪ ಧೂದ್ ಕುಲಿಯಾನ್ ಅರಣ್ಯ ಪ್ರದೇಶದಲ್ಲಿಯೂ ಶೋಧ ಕಾರ್ಯ ನಡೆಸಲಾಗುತ್ತಿದೆ.
Advertisement