
ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಗೆರಿಲ್ಲಾ ಪಡೆ ಕಮಾಂಡರ್ ಬುರ್ಹಾನ್ ಮುಜಾಫರ್ ವಾನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ರೂಪದ ಹಿಂಸಾಚಾರಕ್ಕೆ ತಿರುಗಿದ್ದು, ಭಾನುವಾರ ಒಂದೇ ದಿನ ನಡೆದ ಗಲಭೆಯಲ್ಲಿ 8 ಮಂದಿ ಮೃತರಾಗುವ ಮೂಲಕ ಮೃತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.
ಭಾನುವಾರ ಬೆಳಗ್ಗಿನಿಂದಲೇ ಶ್ರೀನಗರ, ಪುಲ್ವಾಮಾ, ಜಮ್ಮು, ಅನಂತನಾಗ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಧಿಕೃತವಾಗಿ ನಿಷೇಧಾಜ್ಞೆ ಹೇರಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಆದರೂ ಪ್ರತಿಭಟನಾಕಾರರು ಪೊಲೀಸರು ಮತ್ತು ಸೈನಿಕರ ಮೇಲಿನ ದಾಳಿಗಳನ್ನು ನಿಲ್ಲಿಸುತ್ತಲೇ ಇಲ್ಲ. ಹೀಗಾಗಿ ಹಲವು ಪ್ರದೇಶಗಳಲ್ಲಿ ನಡೆದ ಘರ್ಷಣೆಯಲ್ಲಿ ಇಂದು ಒಂದೇ ದಿನ 6 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ ಘರ್ಷಣೆಯಲ್ಲಿ 200ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ಪೈಕಿ 96 ಭದ್ರತಾ ಪಡೆ ಯೋಧರಿಗೂ ಗಾಯಗಳಾಗಿವೆ ಎಂದುತಿಳಿದುಬಂದಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಗಲಭೆ ಪೀಡಿತ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆ ಸ್ಥಗಿತವಾಗಿದ್ದರೂ, ಮೆಸೇಜ್ ಗಳ ಮೂಲಕ ದೇಶ ವಿರೋಧಿ ಚಟುವಟಿಕೆಗೆ ಪ್ರತ್ಯೇಕತಾವಾದಿಗಳ ಪರ ಬೆಂಬಲಿಗರು ಸಂದೇಶ ರವಾನಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಹೀಗಾಗಿ ಮೊಬೈಲ್ ಸೇವೆಗಳನ್ನು ಕೂಡ ಕಡಿತಗೊಳಿಸಲು ಕಾಶ್ಮೀರ ಸರ್ಕಾರ ಚಿಂತನೆ ನಡೆಸಿದ್ದು, ಗಲಭೆ ಹತೋಟಿಗೆ ಬರುವರೆಗೂ ಮೊಬೈಲ್ ಸೇವೆ ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಆದರೆ ಪ್ರಸ್ತುತ ಕಣಿವೆ ರಾಜ್ಯದಲ್ಲಿ ಪವಿತ್ರ ಅಮರನಾಥ ಯಾತ್ರೆ ಭಕ್ತಾದಿಗಳು ಸಿಲುಕಿದ್ದು, ಮೊಬೈಲ್ ಸೇವೆ ಸ್ಥಗಿತಗೊಳಿಸಿದರೆ ಯಾತ್ರಾರ್ಥಿಗಳಿಗೆ ತೊಂದರೆಯಾಗುವ ನಿಟ್ಟಿನಲ್ಲಿ ಸರ್ಕಾರ ಈ ಬಗ್ಗೆ ಗಂಭೀರ ಆಲೋಚನೆಯಲ್ಲಿ ತೊಡಗಿದೆ.
ಇನ್ನು ಗಲಭೆ ಪೀಡಿತ ಅಪಾಯಕಾರಿ ಪ್ರದೇಶಗಳಲ್ಲಿ ಸಿಲುಕಿದ್ದ ನೂರಾರು ಮಂದಿ ಯಾತ್ರಾರ್ಥಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗಿದ್ದು, ಅವರ ಭದ್ರತೆಗಾಗಿ ಸೇನೆ ತುಕಡಿಯನ್ನು ನಿಯೋಜಿಸಲಾಗಿದೆ.
ಪತ್ತೆಯಾಗದ ಪೊಲೀಸರು!
ಇದಲ್ಲದೆ ನಿನ್ನೆ ದಮಾಲ್ ಹಂಜೀಪುರದಲ್ಲಿ ಪ್ರತಿಭಟನಾಕಾರರ ದಾಳಿಗೆ ತುತ್ತಾಗಿ ನಾಪತ್ತೆಯಾಗಿದ್ದ ಮೂವರು ಪೊಲೀಸರ ಕಣ್ಮರೆ ಮುಂದುವರೆದಿದ್ದು, ಇಂದಿಗೂ ಅವರ ಪತ್ತೆಯಾಗಿಲ್ಲ. ಪ್ರತಿಭಟನಾಕಾರರೇ ಅವರನ್ನು ಅಪಹರಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ನಿನ್ನೆ ಕರ್ಫ್ಯೂ ನಡುವೆಯೇ ಬೀದಿಗಿಳಿದಿರುವ ಪ್ರತಿಭಟನಾಕಾರರು ಭದ್ರತಾ ಪಡೆಗಳ ವಿರುದ್ಧ ಘರ್ಷಣೆಗೆ ಇಳಿದ ಪರಿಣಾಮ 18 ವರ್ಷದ ಇರ್ಫಾನ್ ಅಹ್ಮದ್ ಮಲ್ಲಿಕ್ ಎಂಬ ಯುವಕ ಸಾವನ್ನಪ್ಪಿದ್ದ. ಇದೀಗ ಮತ್ತೆ ಐವರು ಸಾವನ್ನಪ್ಪಿದ್ದು, ಸಾವನ್ನಪ್ಪಿದವರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.
ಮುಖ್ಯಮಂತ್ರಿ ಮೆಹಬೂಬಾರಿಂದ ವರದಿ ಪಡೆದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
ಇನ್ನು ಹಿಂಸಾಚಾರ ಪೀಡಿತ ಕಾಶ್ಮೀರದ ಪರಿಸ್ಥಿತಿ ಕುರಿತಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಮುಖ್ಯಮಂತ್ರಿ ಮುಫ್ತಿ ಮೆಹಬೂಬಾರಿಂದ ವರದಿ ಪಡೆದಿದ್ದು, ನಿನ್ನೆ ಮುಫ್ತಿಮೆಹಬೂಬಾ ಅವರು ರಾಜ್ಯದ ಹಿಂಸಾಚಾರ ಕುರಿತಂತೆ ವರದಿ ನೀಡಿದ್ದಾರೆ. ಸುಮಾರು ಅರ್ಧಗಂಟೆ ನಡೆದ ಚರ್ಚೆಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಶಾಂತಿಯುತಗೊಳಿಸಲು ತೆಗೆದುಕೊಳ್ಳಬೇಕಾದ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸೂಚಿಸಿದ್ದಾರೆ.
ಶುಕ್ರವಾರ ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಬುರ್ಹಾನ್ ಮುಜಾಫರ್ ವಾನಿಯನ್ನು ಕೊಂದು ಹಾಕಲಾಗಿತ್ತು. 21 ವರ್ಷದ ಬುರ್ಹಾನ್ ಮುಜಾಫರ್ ವಾನಿ ಮತ್ತು ಆತನ ಇಬ್ಬರು ಸಹಚರರನ್ನು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಯೋಧರು ಹತ್ಯೆ ಮಾಡಿದ್ದರು. ಉಗ್ರ ಪಡೆಯ ನೂತನ ಉಗ್ರರಿಗೆ ಗೆರಿಲ್ಲಾ ಯುದ್ಧದ ಪಾಠ ಹೇಳಿಕೊಡುತ್ತಿದ್ದ ವಾನಿ, ಸಂಘಟನೆಗೆ ಯುವಕರನ್ನು ಸೇರಿಸಿಕೊಳ್ಳವ ಮತ್ತು ಅವರನ್ನು ಪ್ರಚೋದಿಸುವ ಕಾರ್ಯ ಕೂಡ ಮಾಡುತ್ತಿದ್ದ. ಈತನ ಹತ್ಯೆ ಬಳಿಕ ಕಾಶ್ಮೀರ ಉದ್ವಿಗ್ನವಾಗಿತ್ತು. ಮೃತ ಉಗ್ರ ಬುರ್ಹಾನ್ ವಾನಿಯ ಅಂತ್ಯಸಂಸ್ಕಾರ ಮುಗಿದ ಮೇಲೆ ಉದ್ರಿಕ್ತರ ಗುಂಪು ಪೊಲೀಸ್ ಠಾಣೆ ಹಾಗೂ ಬಿಜೆಪಿ ಕಚೇರಿಗಳ ಮೇಲೆ ದಾಳಿ ಮಾಡಿತ್ತು.
Advertisement