
ನವದೆಹಲಿ: ಅತ್ತ ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತಿಭಟನೆ ತಾರಕ್ಕೇರಿರುವಂತೆಯೇ ಉಗ್ರರ ಛೂ ಬಿಟ್ಟು ತಮಾಷೆ ನೋಡುತ್ತಿರುವ ಪಾಕಿಸ್ತಾನ ಗಾಯದ ಮೇಲೆ ಉಪ್ಪು ಸುರಿಯುವ ಕೆಲಸ ಮಾಡಿದೆ.
ಕಾಶ್ಮೀರ ಗಲಭೆ ಕುರಿತಂತೆ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು, ಉಗ್ರ ಕಮಾಂಡರ್ ಬುರ್ಹಾನ್ ವಾನಿಯನ್ನು ಕಾಶ್ಮೀರ ನಾಯಕ ಎಂದು ಕರೆದಿದ್ದಾರೆ. ಅಷ್ಟೇ ಅಲ್ಲದೇ ಭಾರತ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಶ್ಮೀರ ಪ್ರಜೆಗಳ ಮೇಲೆ ಭಾರತೀಯ ಯೋಧರ ಬಲ ಪ್ರದರ್ಶನ ನಿಜಕ್ಕೂ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತದೆ. ಮುಖಂಡನ ಸಾವನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ದೌರ್ಜನ್ಯ ಸರಿಯಲ್ಲ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರುದು. ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಮಾತುಕೊಟ್ಟಂತೆ ಭಾರತ ಕಾಶ್ಮೀರ ಪ್ರಜೆಗಳ ಮಾನವಹಕ್ಕುಗಳ ರಕ್ಷಣೆ ಮಾಡಬೇಕು ಎಂದು ನವಾಜ್ ಷರೀಫ್ ಹೇಳಿದ್ದಾರೆ. ಇತ್ತ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ಹೇಳಿಕೆಯನ್ನು ತೀಕ್ಷ್ಣವಾಗಿ ಖಂಡಿಸಿರುವ ಭಾರತ ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಮೂಲಕ ಪಾಕ್ ಸರ್ಕಾರದ ಮೇಲೆ ಒತ್ತಡ ಹೇರಿದೆ.
ಕಾಶ್ಮೀರ ಗಲಭೆಯಲ್ಲಿ ಪಾಕಿಸ್ತಾನ ಕೈವಾಡ!
ಕಾಶ್ಮೀರದಲ್ಲಿ ನಡೆಯುತ್ತಿರುವ ವ್ಯಾಪಕ ಹಿಂಸಾಚಾರದ ಹಿಂದೆ ಪಾಕಿಸ್ತಾನದ ಕಾಣದ ಕೈಗಳ ಕೈವಾಡವಿರುವ ಕುರಿತು ಶಂಕೆ ವ್ಯಕ್ತವಾಗುತ್ತಿದ್ದು, ಕಣಿವೆ ರಾಜ್ಯದಲ್ಲಿ ಹಿಂಸಾಚಾರ ಸೃಷ್ಟಿ ಮೂಲಕ ಪಾಕಿಸ್ತಾನ ತನ್ನ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದ. ಇದಕ್ಕೆ ಇಂಬು ನೀಡುವಂತೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು, ಕಾಶ್ಮೀರ ಗಲಭೆಯಲ್ಲಿ ಪಾಕಿಸ್ತಾನದ ಕೈವಾಡದ ಕುರಿತು ತಮ್ಮ ಬಳಿ ಬಲವಾದ ಸಾಕ್ಷ್ಯವಿದೆ ಎಂದು ಹೇಳಿದ್ದಾರೆ.
Advertisement