
ಶ್ರೀನಗರ: ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುವ ನಿಟ್ಟಿನಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಿದ್ದು, ಪ್ರಜೆಗಳ ಶವಗಳೊಂದಿಗೆ ರಾಜಕೀಯ ಮಾಡುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬಳಿಕ ಕಣಿವೆ ರಾಜ್ಯದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ಸಂಬಂಧ ಮಂಗಳವಾರವೂ ಭದ್ರತಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಿಎಂ ಮುಫ್ತಿ ಮೆಹಬೂಬಾ ಅವರು, ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಎಲ್ಲ ಕಠಿಣಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಪ್ರತಿಪಕ್ಷಗಳು ಹಾಗೂ ಕೆಲ ಸ್ಥಳೀಯ ಪ್ರತ್ಯೇಕತವಾದಿ ಮುಖಂಡರ ವಿರುದ್ಧ ಕಿಡಿಕಾರಿರುವ ಮುಫ್ತಿ ಮೆಹಬೂಬಾ ಅವರು, ಪ್ರಜೆಗಳ ಶವಗಳೊಂದಿಗೆ ರಾಜಕೀಯ ಮಾಡುವುದು ಬೇಡ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿವೆ ಎಂದು ಗಂಭೀರ ಆರೋಪ ಮಾಡಿದರು.
ಇದೇ ವೇಳೆ ಜಮ್ಮು ಮತ್ತು ಕಾಶ್ಮೀರ ಜನತೆಯನ್ನುದ್ದೇಶಿಸಿ ಮಾತನಾಡಿದ ಮೆಹಬೂಬಾ ಅವರು, ಹಿಂಸೆಯಿಂದ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹಿಂಸೆಯ ಅಂತಿಮ ಹಂತ ರಕ್ತಪಾತವೇ ಹೊರತು ಶಾಂತಿಯಲ್ಲ. ಹಿಂಸಾಚಾರದಲ್ಲಿ ಪಾಲ್ಗೊಂಡ ಅಥವಾ ಗಲಭೆಯಲ್ಲಿ ಸಾವನ್ನಪ್ಪಿದ ಮಂದಿಯ ಸಂಬಂಧಿಕರ ವಿರುದ್ಧ ಸರ್ಕಾರ ಯಾವುದೇ ರೀತಿಯ ಕಾನೂನು ಕ್ರಮ ಜರುಗಿಸುವುದಿಲ್ಲ. ಅವರು ಸುರಕ್ಷತೆ ಮತ್ತು ಗೌರವಯುತ ಜೀವನ ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.
ಕಣಿವೆ ರಾಜ್ಯದಲ್ಲಿ ಭುಗಿಲೆದ್ದ ಹಿಂಸಾಚಾರದ ಬಳಿಕ ಇದೇ ಮೊದಲ ಬಾರಿಗೆ ವಾಹಿನಿಯೊಂದರಲ್ಲಿ ಮಾತನಾಡಿದ ಮುಫ್ತಿ ಮೆಹಬೂಬಾ ಅವರು, ನಾನು ಕೂಡ ಓರ್ವ ತಾಯಿಯಾಗಿದ್ದೇನೆ. ನನಗೂ ಮಕ್ಕಳ ಮೇಲಿನ ಪ್ರೀತಿ ಮತ್ತು ಅವರನ್ನು ಕಳೆದುಕೊಂಡಾಗ ಆಗುವ ನೋವು ಏನೆಂದು ತಿಳಿದಿದೆ. ಆದರೆ ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಮಾಜದ ಕೆಲ ದುಷ್ಟ ಸಮುದಾಯ ನಮ್ಮ ದೌರ್ಬಲ್ಯವನ್ನು ಬಳಸಿಕೊಂಡು ತಮ್ಮ ಸ್ವಹಿತಾಸಕ್ತಿ ಸಾಧನೆಗೆ ಯತ್ನಿಸುತ್ತಿವೆ. ಯುವಕರ ಶವಗಳೊಂದಿಗೆ ರಾಜಕೀಯ ಮಾಡುತ್ತಿವೆ. ನಾವು ಇಡುವ ಒಂದು ಸಣ್ಣ ತಪ್ಪು ಹೆಜ್ಜೆ ನಮ್ಮ ಇಡೀ ಕುಟುಂಬವನ್ನು ಜೀವನಪರ್ಯಂತ ನೋವಿನಲ್ಲಿ ದೂಡುತ್ತದೆ. ಹೀಗಾಗಿ ಯುವಕರು ಆತುರಕ್ಕೆ ಬುದ್ದಿ ನೀಡಿ ಯಾವುದೇ ರೀತಿಯ ಹಿಂಸೆಯಲ್ಲಿ ಪಾಲ್ಗೊಳ್ಳಬಾರದು ಎಂದು ಕಿವಿಮಾತು ಹೇಳಿದರು.
Advertisement