
ಶ್ರೀನಗರ: ಉಗ್ರ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಸಂಬಂಧ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ ಮುಗಿಲು ಮುಟ್ಟಿದ್ದು, ಭದ್ರತಾ ಪಡೆಗಳು ಹಾಗೂ ಪ್ರತಿಭಟನಾಕಾರರ ನಡುವಿನ ಹಿಂಸಾಚಾರ ತಾರಕ್ಕೇರಿರೆದೆ.
ಈ ನಡುವೆ ಕಳೆದ 2 ದಿನಗಳ ಹಿಂದೆ ಪ್ರತಿಭಟನಾಕಾರರ ಗುಂಪೊಂದು ಕುಲ್ಗಾಂ ನ ಧಮಾಲ್ ಹಂಜಿಪೋರಾ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿ ಬರೊಬ್ಬರಿ 70 ಪೊಲೀಸ್ ಗನ್ ಗಳನ್ನು ಹೊತ್ತೊಯ್ದಿದ್ದಾರೆ ಎಂದು ತಿಳಿದುಬಂದಿದೆ. 2 ದಿನಗಳ ಹಿಂದೆಯೇ ಈ ಘಟನೆ ಸಂಭವಿಸಿತ್ತಾದರೂ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಗನ್ ಗಳನ್ನು ಲೂಟಿ ಮಾಡಿದ ಯುವಕರಿಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.
ಇನ್ನು ಪ್ರತಿಭಟನಾಕಾರರು ಹೊತ್ತೊಯ್ದಿರುವ ಗನ್ ಗಳ ಪೈಕಿ ಸೆಮಿ ಆಟೋಮ್ಯಾಟಿಕ್ ಮತ್ತು ಆಟೋ ಮ್ಯಾಟಿಕ್ ಗನ್ ಗಳು ಸೇರಿದ್ದು, ಭದ್ರತಾ ಪಡೆಗದಳಿಗೆ ತಿರುಗೇಟು ನೀಡುವ ಸಲುವಾಗಿ ಪ್ರತಿಭಟನಾಕಾರರು ಈ ಗನ್ ಗಳನ್ನು ಬಳಕೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇನ್ನು ಇಂತಹುದೇ ಮತ್ತಷ್ಟು ಘಟನೆಗಳು ಟ್ರಾಲ್ ಮತ್ತು ಕರಲ್ ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಭವಿಸಿದ್ದು, ಉದ್ರಿಕ್ತರ ಗುಂಪುಗಳು ಸೈನಿಕರಿಂದ ಶಸ್ತ್ರಾಸ್ತ್ರ ಕಸಿಯುವ ಪ್ರಯತ್ನ ಮಾಡಿವೆ.
ಏಕಕಾಲದಲ್ಲಿ ಇಂತಹ ಹಲವು ಪ್ರಯತ್ನಗಳು ನಡೆದಿದ್ದು, ಪ್ರಕರಣದ ಹಿಂದೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆಯೇ ಎಂಬ ಶಂಕೆ ಮೂಡುತ್ತಿದೆ. ಕಾಣದ ಕೈಗಳು ಪ್ರತಿಭಟನಾಕಾರರ ಮೇಲೆ ಪ್ರಭಾವ ಬೀರಿ ಇಂತಹ ಕೆಲಸಗಳನ್ನು ಮಾಡಿಸುತ್ತಿವೆಯೇ ಎಂಬ ಶಂಕೆ ಕೂಡ ಪೊಲೀಸರನ್ನು ಕಾಡತೊಡಗಿದೆ.
ಶುಕ್ರವಾರದ ಸಾಮೂಹಿಕ ಪ್ರಾರ್ಥನೆ ವೇಳೆ ವಿಧ್ವಂಸಕ ಕೃತ್ಯಕ್ಕೆ ಸಂಚು
ಇನ್ನು ಇದೇ ಶುಕ್ರವಾರ ಪ್ರತ್ಯೇಕತಾವಾದಿ ಮುಖಂಡರು ಸೇರಿದಂತೆ ಹಲವು ಮುಸ್ಲಿಂ ಮುಖಂಡರು ಬೃಹತ್ ಸಂಖ್ಯೆಯ ಮುಸ್ಲಿಂ ಯುವಕರೊಂದಿಗೆ ಸಭೆ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು, ಈ ವೇಳೆ ವ್ಯಾಪಕ ಹಿಂಸಾಚಾರವಾಗುವ ಕುರಿತು ಕೇಂದ್ರ ಗುಪ್ತಚರ ಇಲಾಖೆ ಮೂಲಗಳು ತಿಳಿಸಿವೆ. ಬೃಹತ್ ಸಾಮೂಹಿಕ ಪ್ರಾರ್ಥನೆ ಹೆಸರಲ್ಲಿ ಮುಸ್ಲಿಂ ಯುವಕರ ದಾರಿ ತಪ್ಪಿಸುಸವ ಕೆಲಸಕ್ಕೆ ಪ್ರತ್ಯೇಕತಾವಾದಿ ಮುಖಂಡರು ಮುಂದಾಗಿದ್ದು, ಪ್ರಸ್ತುತ ನಡೆಯುತ್ತಿರುವ ಹಿಂಸಾಚಾರ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
Advertisement