
ನವದೆಹಲಿ: ಚೆನ್ನೈನಿಂದ ಪೋರ್ಟ್ಬ್ಲೇರ್ಗೆ ಪ್ರಯಾಣಿಸುವ ವೇಳೆ ಶನಿವಾರ ನಿಗೂಢವಾಗಿ ನಾಪತ್ತೆಯಾದ ಭಾರತೀಯ ವಾಯುಪಡೆಯ ವಿಮಾನ ಸತತ 48 ಗಂಟೆಗಳ ಬಳಿಕವೂ ಪತ್ತೆಯಾಗದ ಹಿನ್ನಲೆಯಲ್ಲಿ ಭಾನುವಾರವೂ ಶೋಧಕಾರ್ಯ ಮುಂದುವರೆದಿದೆ.
ವಾಯುಪಡೆ, ನೌಕಾದಳ , ವಿಪತ್ತು ನಿರ್ವಹಣಾ ಪಡೆಯ ನೂರಾರು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು, ಇಸ್ರೋ ಉಪಗ್ರಹ ಸೇವೆಯನ್ನೂ ಪಡೆದುಕೊಳ್ಳಲಾಗುತ್ತಿದೆ. ನೌಕಾದಳದ 18 ಸಿಬ್ಬಂದಿಗಳು ಹಾಗೂ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿಗಳು ಬಂಗಾಳಕೊಲ್ಲಿಯಲ್ಲಿ ಶೋಧ ನಡೆಸುತ್ತಿದ್ದಾರೆ. ಅಲ್ಲದೆ ಶೋಧ ಕಾರ್ಯದಲ್ಲಿ ಒಂದು ಜಲಾಂತರ್ಗಾಮಿ ನೌಕೆ ಕೂಡ ಕಾರ್ಯ ನಡೆಸುತ್ತಿದ್ದು, 8 ಪಿ81 ವಿಮಾನಗಳು ಶೋಧ ಕಾರ್ಯದಲ್ಲಿ ತೊಡಗಿವೆ. ಇದಲ್ಲದೆ ಸಿ130 ವಿಮಾನಗಳು, ಡೋರ್ನಿಯರ್ಸ್ಸ್ ಗಳು ಶೋಧ ಕಾರ್ಯಾಚರಣೆ ತೊಡಗಿಕೊಂಡಿವೆ.
ಭಾನುವಾರ ಕಡ ಬಂಗಾಳಕೊಲ್ಲಿಯಲ್ಲಿ ಈ ಎಲ್ಲ ವಿಮಾನಗಳು ಶೋಧ ಕಾರ್ಯಾಚರಣೆ ಮುಂದುವರೆಸಿದ್ದು, ವಿಮಾನ ಕೊನೆಯದಾಗಿ ಸಂಪರ್ಕ ಸಾಧಿಸಿದ್ದ ಪ್ರದೇಶದಿಂದ ಸುಮಾರು 1800 ಕಿ.ಮೀ ವ್ಯಾಪ್ತಿಯಲ್ಲಿ ವಿಮಾನಕ್ಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಚುರುಕು ಪಡೆದ ತನಿಖೆ
ಇನ್ನು ವಿಮಾನ ನಾಪತ್ತೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಹಲವು ಕುತೂಹಕಾರಿ ಅಂಶಗಳ ತಿಳಿದುಬಂದಿದ್ದು, ವಿಮಾನ ಹಠಾತ್ ದುರಂತಕ್ಕೀಡಾಗಿರಬಹುದು ಎಂದು ಶಂಕಿಸಿದ್ದಾರೆ. ಅಂತೆಯೇ ವಿಮಾನ ಕೊನೆಯದಾಗಿ ರಾಡಾರ್ ಸಂಪರ್ಕ ಪಡೆದಿದ್ದಾಗ ಎಡಕ್ಕೆ ತಿರುಗಿರುವ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದು, ಟೇಕ್ ಆಫ್ ಆದ ಬಳಿಕ ಬೆಳಗ್ಗೆ 8.46ರವರೆಗೆ ನಿರಂತರ ಸಂಪರ್ಕ ಹೊಂದಿದ್ದ ವಿಮಾನ 9.12ಕ್ಕೆ ಕೊನೆಯದಾಗಿ ಒಮ್ಮೆ ಸಂಕೇತ ನೀಡಿತ್ತು. ಮತ್ತು ಟೇಕ್ ಆಫ್ ಆದ ಬಳಿಕ ಬೆಳಗ್ಗೆ 8.46ರ ಸಮಯದಲ್ಲಿ 1, 400 ಕಿ.ಮೀ ದೂರದಲ್ಲಿ 23 ಸಾವಿರ ಅಡಿ ಎತ್ತರದಲ್ಲಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ತುರ್ತು ಸಂದೇಶ ರವಾನಿಸದ ಪೈಲಟ್!
ತಜ್ಞರು ಅಭಿಪ್ರಾಯಪಟ್ಟಿರುವಂತೆ ಸಾಮಾನ್ಯವಾಗಿ ಅಪಘಾತದ ಸಮಯದಲ್ಲಿ ಪೈಲಟ್ಗೆ ತುರ್ತು ಸಂದೇಶ ನೀಡಲು ಸಮಯವಿರುತ್ತದೆ. ಆದರೆ ಹಠಾತ್ ದುರಂತ ನಡೆದ ಸಂದರ್ಭದಲ್ಲಿ ಪೈಲಟ್ಗೆ ಸಂದೇಶ ರವಾನಿಸುವ ಅವಕಾಶವಿರುವುದಿಲ್ಲ. ಹೀಗಾಗಿ ಕಂಟ್ರೋಲ್ ರೂಮ್ ಗೆ ವಿಮಾನದಿಂದ ಯಾವುದೇ ಸಂದೇಶ ಲಭ್ಯವಾಗಿಲ್ಲ ಎಂಬ ಅಭಿಪ್ರಾಯವ್ಯಕ್ತವಾಗಿದೆ. ಅಲ್ಲದೆ ಒಂದು ವೇಳೆ ವಿಮಾನ ಅಪಘಾತಕ್ಕೀಡಾಗಿದ್ದರೆ ವಿಮಾನದ ಅವಶೇಷಗಳಾದರೂ ಪತ್ತೆಯಾಗಬೇಕಿತ್ತು. ಹೀಗಾಗಿ ವಿಮಾನ ಪತನವಾಗಿದೆಯೇ ಅಥವಾ ಅಜ್ಞಾತ ಸ್ಥಳಕ್ಕೆ ಹೋಗಿರಬಹುದೇ ಎಂಬ ಶಂಕೆ ಕೂಡ ವ್ಯಕ್ತವಾಗುತ್ತಿದೆ.
Advertisement