ಕಾಂಗ್ರೆಸ್ ನಾಯಕ, ಸಿಎಂ ಆಪ್ತ ಮರಿಗೌಡ ಶೀಘ್ರ ಬಂಧನ: ಪರಮೇಶ್ವರ

ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಬೆದರಿಕೆ ಹಾಕಿ, ತಲೆಮರೆಸಿಕೊಂಡಿರುವ ಮುಖ್ಯಮಂತ್ರಿ...
ಜಿ. ಪರಮೇಶ್ವರ
ಜಿ. ಪರಮೇಶ್ವರ
ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಬೆದರಿಕೆ ಹಾಕಿ, ತಲೆಮರೆಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಮೈಸೂರು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಮರಿಗೌಡ ಅವರನ್ನು ಶೀಘ್ರ ಬಂಧಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಸೋಮವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಮರಿಗೌಡ ಪ್ರಕರಣದ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಪರಮೇಶ್ವರ, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ ಮತ್ತು ಮತ್ತೊಬ್ಬ ಆರೋಪಿ ಮರಿಗೌಡನನ್ನು ಪೊಲೀಸರು ಶೀಘ್ರದಲ್ಲಿಯೇ ಬಂಧಿಸಲಿದ್ದಾರೆ ಎಂದರು.
ನಮ್ಮ ಪೊಲೀಸರು ಉಗ್ರರನ್ನೇ ಬಂಧಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ತಲೆಮರೆಸಿಕೊಂಡಿರುವ ಒಬ್ಬ ಮರಿಗೌಡನನ್ನು ಬಂಧಿಸುವುದು ಅವರಿಗೆ ಕಷ್ಟವೇನಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.
ಮರಿಗೌಡ ಅವರು ಅಧಿಕಾರಿಯ ವರ್ಗಾವಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಶಿಖಾ ಅವರಿಗೆ ಬೆದರಿಕೆ ಹಾಕಿದ್ದ. ಈ ಸಂಬಂಧ ಶಿಖಾ ಅವರು ಕಾಂಗ್ರೆಸ್ ನಾಯಕ ಸಿಎಂ ಆಪ್ತ ಮರಿಗೌಡ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಮರಿಗೌಡ ತಲೆಮರೆಸಿಕೊಂಡಿದ್ದಾನೆ.
ಮರಿಗೌಡ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದ್ದು, ಬಂಧನ ಭೀತಿಯಲ್ಲಿರುವ ಸಿಎಂ ಆಪ್ತ ಕೇರಳದ ಕೊಟ್ಟಂನ ಖಾಸಗಿ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದ್ದಾನೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com