ಬಸ್ ಹಿಂಬದಿಯಲ್ಲಿ ಅಕ್ರಮವಾಗಿ ಸಿಗರೇಟ್, ರಾಸಾಯನಿಕ ಸಾಗಾಟ

ಅಗ್ನಿ ದುರಂತಕ್ಕೆ ಬಸ್ ಹಿಂಬದಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ರಾಸಾಯನಿಕ ಮತ್ತು ಅಪಾರ ಪ್ರಮಾಣದ ಸಿಗರೇಟ್ ಪ್ಯಾಕ್ ಗಳೇ ಕಾರಣ ಎಂದು ತಿಳಿದುಬಂದಿದೆ..
ಬಸ್ ನಲ್ಲಿ ಸಿಗರೇಟ್ ಮತ್ತು ಕೆಮಿಕಲ್ ಪತ್ತೆ (ಸಾಂದರ್ಭಿಕ ಚಿತ್ರ)
ಬಸ್ ನಲ್ಲಿ ಸಿಗರೇಟ್ ಮತ್ತು ಕೆಮಿಕಲ್ ಪತ್ತೆ (ಸಾಂದರ್ಭಿಕ ಚಿತ್ರ)

ಹುಬ್ಬಳ್ಳಿ: ಬೆಳಗ್ಗೆ ಹುಬ್ಬಳ್ಳಿ ಸಮೀಪ ಸಂಭವಿಸಿದ ಭೀಕರ ಬಸ್ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಅಗ್ನಿ ದುರಂತಕ್ಕೆ ಬಸ್ ಹಿಂಬದಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ರಾಸಾಯನಿಕ ಮತ್ತು ಅಪಾರ ಪ್ರಮಾಣದ ಸಿಗರೇಟ್ ಪ್ಯಾಕ್ ಗಳೇ ಕಾರಣ ಎಂದು ತಿಳಿದುಬಂದಿದೆ.

ಬಸ್ ಅಗ್ನಿ ದುರಂತ ಪ್ರಕರಣದ ತನಿಖೆ ನಡೆಸುತ್ತಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ತಜ್ಞರು ಅಗ್ನಿಗಾಹುತಿಯಾದ ಬಸ್ ನಲ್ಲಿ ಶೋಧ ಕಾರ್ಯ ನಡೆಸುತ್ತಿದ್ದು, ಈ ವೇಳೆ ಬಸ್  ಹಿಂಬದಿಯಲ್ಲಿನ ಖಾಲಿ ಪ್ರದೇಶದಲ್ಲಿ ಅಪಾರ ಪ್ರಮಾಣದ ಸಿಗರೇಟ್, ರಾಸಾಯನಿಕಗಳು ಮತ್ತು ಕೆಲ ವೈದ್ಯಕೀಯ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಶಾರ್ಟ್ ಸರ್ಕ್ಯೂಟ್  ಸಂಭವಿಸಿದ ವೇಳೆ ಈ ವಸ್ತುಗಳಿಗೂ ಬೆಂಕಿ ತಗುಲಿದ ಪರಿಣಾಮ ಬೆಂಕಿಯ ಜ್ವಾಲೆಗಳು ವ್ಯಾಪಕವಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗುತ್ತಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪ್ರಾದೇಶಿಕ ಅಪರ ಸಾರಿಗೆ ಆಯುಕ್ತ ಮುನಿವೀರೇಗೌಡ ಅವರು, ಬಸ್ ನ ಹಿಂಭಾಗದಲ್ಲಿ ಅಕ್ರಮವಾಗಿ ಸಿಗರೇಟ್, ರಾಸಾಯನಿಕಗಳು  ಪತ್ತೆಯಾಗಿವೆ. ಶಾರ್ಟ್ ಸರ್ಕ್ಯೂಟ್ ಆದ ಸಂದರ್ಭದಲ್ಲಿ ಸಿಗರೇಟ್ ಮತ್ತು ರಾಸಾಯನಿಕಗಳಿಂದಾಗಿ ಬೆಂಕಿ ಜ್ವಾಲೆ ಹೆಚ್ಚಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಕಾನೂನು  ಪ್ರಕಾರ ಇಂತಹ ವಸ್ತುಗಳನ್ನು ಪ್ರಯಾಣಿಕ ಬಸ್ ನಲ್ಲಿ ಸಾಗಾಟ ಮಾಡುವಂತಿಲ್ಲ ಎಂದು ಅವರು ಹೇಳಿದ್ದಾರೆ.

ಮಾಲೀಕರ ವಿರುದ್ಧ ಕಠಿಣ ಕ್ರಮ
ಇನ್ನು ಬಸ್ ನಲ್ಲಿ ಅಕ್ರಮವಾಗಿ ರಾಸಾಯನಿಕ ಮತ್ತು ಸಿಗರೇಟ್ ಸಾಗಣೆ ಪ್ರಕರಣ ಸಂಬಂಧ ದುರ್ಗಾಂಬಾ ಟ್ರಾವೆಲ್ಸ್ ಮಾಲೀಕರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದ್ದು, ಮಾಲೀಕರ ವಿರುದ್ಧ  ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com