ಕೋಲ್ಕತ್ತಾ: ಸಾಮಾಜಿಕ ಕಾರ್ಯಕರ್ತೆ ಮತ್ತು ಜ್ಞಾನಪೀಠ ವಿಜೇತ ಖ್ಯಾತ ಸಾಹಿತಿ ಮಹಾಶ್ವೇತ ದೇವಿ ಕೋಲ್ಕತ್ತಾದ ಸಿಟಿ ನರ್ಸಿಂಗ್ ಹೋಮ್ ನಲ್ಲಿ ಗುರುವಾರ ನಿಧಾನ ಹೊಂದಿದ್ದಾರೆ. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 90 ವರ್ಷದ ಸಾಹಿತಿ ಚಿಕಿತ್ಸೆ ಪಡೆಯುತ್ತಿದ್ದರು.
ರಾಮನ್ ಮ್ಯಾಗ್ಸಸೆ ಪ್ರಶಸ್ತಿ ವಿಜೇತ ಸಾಹಿತಿ ತಮ್ಮ ಸೊಸೆ ಮತ್ತು ಮೊಮ್ಮಗುವನ್ನು ಅಗಲಿದ್ದಾರೆ. ಎರಡು ವರ್ಷದ ಹಿಂದೆ ಅವರ ಪುತ್ರ ನಿಧನರಾಗಿದ್ದರು.
90 ವರ್ಷದ ಸಾಹಿತಿ ದಿನನಿತ್ಯದ ಡಯಾಲಿಸಿಸ್ ಗೆ ಒಳಗಾಗಿದ್ದು ಕಳೆದ 15 ದಿನಗಳಿಂದ ಅವರ ಸ್ಥಿತಿ ಗಂಭೀರವಾಗಿತ್ತು. "ಅವರು ಹೃದಯಾಘಾತ ಮತ್ತು ವಿವಿಧ ಅಂಗಾಂಗಳ ವೈಫಲ್ಯದಿಂದ ಮಧ್ಯಾಹ್ನ 3:16 ಕ್ಕೆ ನಮ್ಮನ್ನಗಲಿದರು" ಎಂದು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹೇಳಿದ್ದಾರೆ.
1996 ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದ ಬರಹಗಾರ್ತಿ ಅನಾರೋಗ್ಯದಿಂದ ಎರಡು ತಿಂಗಳುಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.