ಮಹದಾಯಿ ವಿವಾದ: ನ್ಯಾಯಾಧಿಕರಣದ ಅಂತಿಮ ತೀರ್ಪಿನ ಪ್ರಮುಖಾಂಶಗಳು

ಮಲಪ್ರಭಾ ಕಣಿವೆಯಲ್ಲಿ ಉಂಟಾಗಿರುವ ನೀರಿನ ಕೊರತೆಯನ್ನು ಮಹದಾಯಿ ಮೂಲಕ ನೀಗಿಸಲು ಕರ್ನಾಟಕ ನಡೆಸಿದ ಕಾನೂನು ಹೋರಾಟಕ್ಕೆ ನ್ಯಾಯಾಧಿಕರಣದಲ್ಲಿ ಸೋಲಾಗಿದ್ದು, ಕರ್ನಾಟಕದ ಅರ್ಜಿಯನ್ನು ನ್ಯಾಯಾಧಿಕರಣ ತಿರಸ್ಕರಿಸಿದೆ...
ಮಹದಾಯಿ ವಿವಾದ (ಸಂಗ್ರಹ ಚಿತ್ರ)
ಮಹದಾಯಿ ವಿವಾದ (ಸಂಗ್ರಹ ಚಿತ್ರ)

ನವದೆಹಲಿ: ಮಲಪ್ರಭಾ ಕಣಿವೆಯಲ್ಲಿ ಉಂಟಾಗಿರುವ ನೀರಿನ ಕೊರತೆಯನ್ನು ಮಹದಾಯಿ ಮೂಲಕ ನೀಗಿಸಲು ಕರ್ನಾಟಕ ನಡೆಸಿದ ಕಾನೂನು ಹೋರಾಟಕ್ಕೆ ನ್ಯಾಯಾಧಿಕರಣದಲ್ಲಿ  ಸೋಲಾಗಿದ್ದು, ಕರ್ನಾಟಕದ ಅರ್ಜಿಯನ್ನು ನ್ಯಾಯಾಧಿಕರಣ ತಿರಸ್ಕರಿಸಿದೆ.

ಮಹದಾಯಿ ನದಿಯಿಂದ 7 ಟಿಎಂಸಿ ನೀರನ್ನು ಏತ ನೀರಾವರಿ ಮೂಲಕ ಮಲಪ್ರಭಾಕ್ಕೆ ಹರಿಸಬೇಕೆಂಬ ಕರ್ನಾಟಕದ ಮಧ್ಯಂತರ ಅರ್ಜಿಯನ್ನು ನ್ಯಾ.ಜೆ.ಎಂ. ಪಾಂಚಾಲ್ ನೇತೃತ್ವದ ತ್ರಿಸದಸ್ಯ  ನ್ಯಾಯಾಧಿಕರಣ ವಜಾಗೊಳಿಸಿದೆ. ಅಲ್ಲದೆ ಕಳೆದ ವರ್ಷಕ್ಕೆ ಹೋಲಿಸಿದರೆ ಧಾರವಾಡ, ಬೆಳಗಾವಿ ಮತ್ತು ಗದಗ ಜಿಲ್ಲೆಗಳ ವ್ಯಾಪ್ತಿಗೆ ಬರುವ ಸವದತ್ತಿ, ರಾಮದುರ್ಗ ಮತ್ತು ಬೈಲಹೊಂಗಲ ದಲ್ಲಿ  ಈ ಸಲ ಉತ್ತಮ ಮಳೆಯಾಗಿದೆ ಎಂದು ಬೆಂಗಳೂರಿನಲ್ಲಿರುವ ಕೇಂದ್ರ ಹವಾಮಾನ ಇಲಾಖೆ ವರದಿಯೇ ಹೇಳುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಅಂತೆಯೇ 2015ರಲ್ಲಿ ಅರ್ಜಿ ಸಲ್ಲಿಸಿದ್ದ ಸಂದರ್ಭದಲ್ಲಿ ಮಳೆ ಪ್ರಮಾಣ ಕಡಿಮೆಯಿತ್ತಾದರೂ ಸದ್ಯಕ್ಕೆ ಅಲ್ಲಿ ಒಳ್ಳೆಯ ಮಳೆಯಾಗಿರುವುದರಿಂದ ಕರ್ನಾಟಕಕ್ಕೆ ‘ತುರ್ತ ಪರಿಹಾರ’ ನೀಡುವ  ಸನ್ನಿವೇಶ ಈಗ ಎದುರಾಗುವುದೇ ಇಲ್ಲ. ಹೀಗಾಗಿ ಈ ಮಧ್ಯಂತರ ಅರ್ಜಿಯೇ ನಿರರ್ಥಕ ಎಂದು ನ್ಯಾಯಾಧಿಕರಣ ಅಭಿಪ್ರಾಯಪಟ್ಟಿದೆ.

ಇನ್ನು ನ್ಯಾಯಾಧಿಕರಣ ಕರ್ನಾಟಕದ ಅರ್ಜಿಯನ್ನು ತಿರಸ್ಕರಿಸಲು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳು ಇಲ್ಲಿವೆ.

1. ಬೃಹತ್ ಪ್ರಮಾಣದ ಶಾಶ್ವತ ಕಾಮಗಾರಿಗಳು ಮತ್ತು ನದಿಗೆ ಅಡ್ಡವಾಗಿ ಅಣೆಕಟ್ಟನ್ನು ನಿರ್ಮಾಣ ಮಾಡದೆ ನದಿಯಿಂದ 7 ಟಿಎಂಸಿ ನೀರನ್ನು ತೆಗೆಯಲು ಸಾಧ್ಯವಿಲ್ಲ. ಅಣೆಕಟ್ಟುಗಳನ್ನು  ತಾತ್ಕಾಲಿಕ ಕಾಮಗಾರಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ಅಲ್ಲದೆ, ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಮಾಡಿದರೆ ಅಲ್ಲಿ ಸಹಜವಾಗಿಯೇ ನೀರು ಸಂಗ್ರಹಗೊಳ್ಳುತ್ತದೆ. ಮಹದಾಯಿ ಮತ್ತು  ಮಲಪ್ರಭಾ ನದಿಗಳ ನಡುವಿನ ಅಂತರ ಹೆಚ್ಚಿರುವುದರಿಂದ, ನೀರನ್ನು ಒಂದೆಡೆಯಿಂದ ಮತ್ತೊಂದೆಡೆ ತಿರುಗಿಸಲು ಶಾಶ್ವತ ಕಾಮಗಾರಿ ಅನಿವಾರ್ಯ. ಹೀಗಾಗಿ ಶಾಶ್ವತ ಕಾಮಗಾರಿ ಬೇಕಾಗಿಲ್ಲ  ಎಂಬ ಕರ್ನಾಟಕದ ವಾದ ಒಪ್ಪುವುದು ಕಷ್ಟ.

2. 1974ರ ಪರಿಸರ ಮಾಲಿನ್ಯ ತಡೆ ಮತ್ತು ನಿಯಂತ್ರಣ (ದ ವಾಟರ್ ಆಕ್ಟ್ 1974), 1986ರ ಪರಿಸರ ರಕ್ಷಣಾ ಕಾಯ್ದೆ, ವನ್ಯಜೀವಿ ಸಂರಕ್ಷಣೆ ಮತ್ತು ಜೀವ ವೈವಿಧ್ಯಗಳ ರಕ್ಷಣಾ ಕಾಯ್ದೆಗಳ ಪ್ರಕಾರ  ಇಂಥಹ ಯೋಜನೆಗಳಿಗೆ ಕೇಂದ್ರ ಸರ್ಕಾರ ಅಥವಾ ಯೋಜನಾ ಆಯೋಗ ಸೇರಿದಂತೆ ಹಸಿರು ನ್ಯಾಯಾಧಿಕರಣದ ಅನುಮತಿ ಬೇಕು. ಆದರೆ ಕರ್ನಾಟಕ ಇಂಥ ಯಾವುದೇ ಅನುಮತಿಗಳನ್ನು  ಪಡೆದುಕೊಂಡಿಲ್ಲ.

3. ಹೆಚ್ಚುವರಿ ನೀರು ನಿರರ್ಥಕವಾಗಿ ಸಮುದ್ರ ಸೇರುತ್ತಿದೆ ಎಂಬ ಕರ್ನಾಟದ ವಾದವನ್ನು ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ವೈಜ್ಞಾನಿಕವಾಗಿ ಸಮುದ್ರದ ನೀರು ಕ್ರಮೇಣವಾಗಿ  ಆವಿಯಾಗುತ್ತಲೇ ಇರುತ್ತದೆ. ಗಾಳಿಯಲ್ಲಿನ ತೇವಾಂಶದಿಂದಾಗಿ ಮೋಡಗಳು ಉತ್ಪತ್ತಿಯಾಗಿ ನಂತರ ಮಳೆ ಬರುತ್ತದೆ. ಭೂಮಿ, ನದಿ ಮತ್ತು ಸಮುದ್ರದ ನಡುವಿನ ನೀರಿನ ಸಂಚಾರಕ್ಕೆ ಜಲಚಕ್ರ  ಎನ್ನುತ್ತೇವೆ. ಈ ನೀರಿನ ಸಂಚಾರದಿಂದಲೇ ಭೂಮಿಯಲ್ಲಿರುವ ಎಲ್ಲಾ ಜೀವ ಸಂಕುಲಗಳಿಗೆ ಶುದ್ಧ ನೀರು ಸಿಗುತ್ತಿದೆ. ಕೆಲವೇ ಕೆಲವು ನದಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ನದಿಗಳ ನೀರು  ಕೊನೆಗೆ ಸಮುದ್ರವನ್ನು ಸೇರುತ್ತವೆ. ಸಮುದ್ರಕ್ಕೆ ಸೇರುವ ಮುನ್ನ ಕಣಿವೆ ರಾಜ್ಯಗಳು ತಮ್ಮ ಅಗತ್ಯಕ್ಕೆ ನೀರನ್ನು ಬಳಸಿಕೊಳ್ಳುವುದು ಸಹಜ. ಅದರೆ ಕರ್ನಾಟಕ ಮಂಡಿಸಿದಂತೆ 7 ಟಿಎಂಸಿ ಏತ  ನೀರಾವರಿಗೆ ಸಮ್ಮತಿ ನೀಡಿದಲ್ಲಿ ಮಹದಾಯಿ ಕಣಿವೆ ವ್ಯಾಪ್ತಿಯ ಪರಿಸರದ ಮೇಲೆ ಅಗಾಧ ಪರಿಣಾಮ ಬೀರಲಿದೆ ಮತ್ತು ನೈಸರ್ಗಿಕ ಅಸಮತೋಲನಕ್ಕೆ ನಾವೇ ಅವಕಾಶ ನೀಡಿದಂತಾಗುತ್ತದೆ.

4. ಇನ್ನು ಕರ್ನಾಟಕ ನೀರನ್ನು ತೆಗೆಯಲು ಗುರುತಿಸಿರುವ ಮಹದಾಯಿಯ ಉದ್ದೇಶಿತ 3 ಕಣಿವೆ ಪ್ರದೇಶಗಳಲ್ಲಿ ಹೆಚ್ಚುವರಿ ನೀರಿನ ಲಭ್ಯತೆ ಇದೆ ಎಂಬುದು ಸಾಬೀತಾಗಿಲ್ಲ. ಒಂದು ವೇಳೆ ನೀರು  ಹೆಚ್ಚಿದೆ ಎಂದಾಗಿದ್ದರೆ ನೀರು ಸಮುದ್ರಕ್ಕೆ ಸೇರಿ ವ್ಯರ್ಥವಾಗುತ್ತಿದೆ ಎಂಬ ವಾದಕ್ಕೆ ಪ್ರಸ್ತುತತೆ ಇರುತ್ತಿತ್ತು. ಆದರೆ ಹೆಚ್ಚುವರಿ ನೀರಿಲ್ಲ ಎಂದ ಮೇಲೆ ಸಮುದ್ರಕ್ಕೆ ಹರಿವ ನೀರನ್ನು ತಡೆಯುವುದು  ಹೇಗೆ?.. 7 ಟಿಎಂಸಿ ನೀರು ಎತ್ತುವುದರಿಂದ ನೀರು ಎತ್ತಲು ಗುರುತಿಸಲಾಗಿರುವ ಮಹದಾಯಿ ಕಣಿವೆಯ 3 ಪ್ರದೇಶಗಳ ಕೆಳ ಭಾಗದ ಮೇಲೆ ಅದು ಯಾವ ರೀತಿಯ ಪರಿಣಾಮಗಳನ್ನು ಬೀರಲಿದೆ  ಎಂಬುದನ್ನು ಕರ್ನಾಟಕ ಈ ನ್ಯಾಯಾಧಿಕರಣಕ್ಕೆ ವಿವರಿಸಿಲ್ಲ. ಮಹದಾಯಿ ನೀರು ವ್ಯರ್ಥವಾಗಿ ನದಿ ಸೇರುತ್ತಿದೆ ಎಂದು ಒತ್ತಿ ಹೇಳುತ್ತಿರುವ ಕರ್ನಾಟಕ ಮೊದಲು ‘ನದಿಗಳ ಶಾರೀರಿಕ  ವಿಜ್ಞಾನ’ವನ್ನು ಅರಿತುಕೊಳ್ಳಬೇಕು.

5. 2015ರಲ್ಲಿ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯಲ್ಲಿ ಮಲಪ್ರಭಾ ಕಣಿವೆ ಜನರ ಕುಡಿಯುವ ಮತ್ತು ನೀರಾವರಿ ಉದ್ದೇಶಗಳಿಗೆ 7 ಟಿಎಂಸಿ ನೀರನ್ನು ಬಳಸಿಕೊಳ್ಳಲಾಗುವುದು ಎಂದು  ದಾಖಲಿಸಲಾಗಿತ್ತು. ಆದರೆ, ನಂತರ ಸಲ್ಲಿಸಲಾದ ಪರಿಷ್ಕೃತ ಅರ್ಜಿಯಲ್ಲಿ ಈ ಪ್ರಮುಖ ಅಂಶಗಳನ್ನು ದಾಖಲಿಸದಿರುವುದು ಏಕೆ ಎಂಬುದು ತಿಳಿಯುತ್ತಿಲ್ಲ. 7 ಟಿಎಂಸಿ ನೀರನ್ನು ಎತ್ತುವುದು  ಕಲ್ಪಿಸಿದಷ್ಟು ಸುಲಭವಲ್ಲ. ಇದಕ್ಕೆ ಬೃಹತ್ ಗಾತ್ರದ ಕಾಮಗಾರಿ, ಅತಿ ಭಾರದ ಪಂಪ್​ಸೆಟ್​ಗಳು, ಭಾರಿ ಸುತ್ತಳತೆಯ ಮತ್ತು ಉದ್ದದ ಪೈಪ್​ಲೈನ್​ಗಳು ಬೇಕು. ಆದರೆ ಏತ ನೀರಾವರಿ ಯೋಜನೆ  ಬಗ್ಗೆ ಹೇಳುವ ಕರ್ನಾಟಕ ನೀರಾವರಿ ನಿಗಮದ ವರದಿಯಲ್ಲಿ ಕಾಮಗಾರಿಗಳ ಬಗ್ಗೆ ಯಾವುದೇ ನಿಖರ ಮಾಹಿತಿ ನೀಡಿಲ್ಲ.

6. ಕೃಷ್ಣಾ ಜಲವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಮತ್ತು ಕಣಿವೆ ರಾಜ್ಯಗಳ ಒಪ್ಪಿಗೆ ಇಲ್ಲದೆ ರಾಜ್ಯಗಳು ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್  ಈಗಾಗಲೇ ಹೇಳಿದೆ. ಹೀಗಾಗಿ, ಅಗತ್ಯ ಪರಿಸರ ಸಮ್ಮತಿ, ಯೋಜನಾ ಆಯೋಗದ ಅನುಮತಿ ಸೇರಿದಂತೆ ವಿವಿಧ ಕಾಯ್ದೆಗಳಲ್ಲಿ ಹೇಳಲಾಗಿರುವ ಅಂಶಗಳನ್ನು ಪಾಲಿಸುವ ಮುನ್ನವೇ  ನ್ಯಾಯಾಧಿಕರಣ 7 ಟಿಎಂಸಿ ನೀರನ್ನು ಎತ್ತಲು ಕರ್ನಾಟಕಕ್ಕೆ ಅವಕಾಶ ನೀಡುವುದು ಅಸಾಧ್ಯ.

7. ನಿರ್ದಿಷ್ಟ ತಿಂಗಳಲ್ಲಿ ನೀರಿನ ಕೊರತೆ ಉಂಟಾದರಷ್ಟೇ ಮಹದಾಯಿಯಿಂದ ನೀರನ್ನು ಎತ್ತಲಾಗುವುದು ಎಂದು ಕರ್ನಾಟಕ ಹೇಳಿದೆ. ಆದರೆ ನೀರಿನ ಕೊರತೆ, ಒಳ ಹರಿವಿನ ಪ್ರಮಾಣದ ಕುರಿತ  ಮಾಹಿತಿ ತಿಂಗಳ ಕೊನೆಯಲ್ಲಿ ಗೊತ್ತಾಗುವುದೇ ವಿನಃ ಆರಂಭದಲ್ಲಲ್ಲ. ಹೀಗಾಗಿ ಕರ್ನಾಟಕದ ಪ್ರಸ್ತಾವಿತ ಯೋಜನೆ ಅನುಷ್ಠಾನ ಯೋಗ್ಯವಾಗಿದೆ ಎಂದು ನಮಗನಿಸುತ್ತಿಲ್ಲ. ಕರ್ನಾಟಕ  ಪರಿಷ್ಕೃತ ಅರ್ಜಿಯಲ್ಲಿ ಮಂಡಿಸಲಾದ ಕೆಲ ಅಂಶಗಳು ಗಂಭೀರವಾಗಿದ್ದರೂ, ಜಲವಿವಾದ ಪ್ರಕರಣ ವಿಚಾರಣೆಯ ಮಧ್ಯಭಾಗದಲ್ಲಿ ಕರ್ನಾಟಕದ ಬೇಡಿಕೆಗಳನ್ನು ಪುರಸ್ಕರಿಸುವುದು ನಮಗೆ ಸರಿ  ಕಾಣುವುದಿಲ್ಲ. ಕೇವಲ ಒಂದು ರಾಜ್ಯಕ್ಕೆ ಅನುಕೂಲ ಮಾಡಿಕೊಟ್ಟ ಸಂದೇಶ ರವಾನಿಸುವುದು ಸಮರ್ಥನೀಯವೂ ಅಲ್ಲ ಎಂದು ನ್ಯಾಯಾಧಿಕರಣ ಅಭಿಪ್ರಾಯಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com