
ನವದೆಹಲಿ: ದೇಶ ಕಾಯುವ ಸೈನಿಕರಿಗೆ ನೀಡುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಮಹಾಲೇಖಪಾಲರು (ಸಿಎಜಿ) ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ಸೇನಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಭಾರತದ ಗಡಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೈನಿಕರಿಗೆ ಗುಣಟ್ಟವಿಲ್ಲದ ಮತ್ತು ಕಡಿಮೆ ಪ್ರಮಾಣದ ಆಹಾರ ನೀಡಲಾಗುತ್ತಿದ್ದು, ಕೆಲವು ಪ್ರಕರಣಗಳಲ್ಲಿ ಅವಧಿ ಮುಗಿದ ಆಹಾರಗಳನ್ನು ಸೈನಿಕರು ಬೇರೆ ವಿಧಿಯಿಲ್ಲದೇ ತಿನ್ನುವಂತಹ ಪರಿಸ್ಥಿತಿ ಇದೆ ಎಂದು ಸಿಎಜಿ ತನ್ನ ವರದಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ. ಇತ್ತೀಚೆಗೆ ಸೈನಿಕರಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಮತ್ತು ಆ ಕುರಿತ ದಾಖಲೆಗಳನ್ನು ಪರಿಶೀಲಿಸಿದ ಸಿಎಜಿ, ಈ ಬಗ್ಗೆ ವರದಿ ಸಂಸತ್ ಗೆ ವರದಿ ನೀಡಿದ್ದು, ವರದಿಯಲ್ಲಿ ಸೈನಿಕರಿಗೆ ನೀಡಲಾಗುತ್ತಿರುವ ಆಹಾರಗಳು ತೀರಾ ಕೆಟ್ಟದಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಸಿಎಜಿ ನೀಡಿರುವ ತನ್ನ ವರದಿಯಲ್ಲಿ ಶೇ.68ರಷ್ಟು ಸೈನಿಕರು ತಮಗೆ ನೀಡುತ್ತಿರುವ ಆಹಾರಗಳ ಗುಣಮಟ್ಟ ಕಳಪೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಸೈನಿಕರಿಗೆ ನೀಡಲಾಗುತ್ತಿರುವ ಮಾಂಸಾಹಾರ ಮತ್ತು ತರಕಾರಿಗಳು ತೀರ ಕಳಪೆಮಟ್ಟದ್ದಾಗಿದ್ದು, ಹಲವು ಸೇನಾ ಕ್ಯಾಂಪ್ ಗಳಲ್ಲಿ ಕೊಳೆತ ಮಾಂಸಾಹಾರ ಮತ್ತು ತರಕಾರಿಗಳನ್ನು ಬಳಸಿ ಆಹಾರ ತಯಾರು ಮಾಡಲಾಗುತ್ತಿದೆ. ಇದರಿಂದ ಸೈನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಸೈನಿಕರ ಆಹಾರಕ್ಕಾಗಿಯೇ ವಾರ್ಷಿಕ ಸುಮಾರು 1500 ಕೋಟಿ ರು.ಗಳನ್ನು ವ್ಯಯಿಸುತ್ತಿದ್ದು, ಸುಮಾರು 1.3 ಮಿಲಿಯನ್ ಸೈನಿಕರಿಗೆ ಆಹಾರ ಒದಗಿಸಲಾಗುತ್ತಿದೆ. ಇದನ್ನು ಸಮರ್ಪಕವಾಗಿ ಬಳಿಸಿದ್ದೇ ಆದಲ್ಲಿ ಗುಣಮಟ್ಟದ ಆಹಾರಗಳನ್ನು ಸೈನಿಕರಿಗೆ ನೀಡಬಹುದು. ಆದರೆ ಅಧಿಕಾರಿಗಳ ನಿರ್ಲಕ್ಷ್ಯತನ ಹಾಗೂ ಗೋದಾಮುಗಳ ಕಳಪೆ ನಿರ್ವಹಣೆಯಿಂದಾಗಿ ಸೈನಿಕರ ಆಹಾರ ಕಳಪೆಯಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ತಿಳಿದುಬಂದಿದೆ.
ಸೈನಿಕರ ಆಹಾರ ಗುಣಮಟ್ಟ ಉತ್ತಮ ಪಡಿಸುವ ನಿಟ್ಟಿನಲ್ಲಿ ಗೋದಾಮುಗಳನ್ನು ಆಧುನೀಕರಿಸುವ ಮತ್ತು ಸ್ಥಳೀಯ ಮಟ್ಟದಲ್ಲಿ ಆಹಾರ ಸಾಮಾನುಗಳನ್ನು ಸಂಗ್ರಹಿಸುವ ಅಂಶವೂ ಸೇರಿದಂತೆ 2011ರಲ್ಲಿ ಸಂಸತ್ ಗೆ ಸಲ್ಲಿಸಲಾಗಿದ್ದ 12 ಪ್ರಸ್ತಾಪಗಳ ಪೈಕಿ ಕೇಂದ್ರ ಸರ್ಕಾರ ಕೇವಲ 2 ಅಂಶಗಳನ್ನು ಮಾತ್ರ ಜಾರಿಗೆ ತಂದಿದ್ದು, ಇನ್ನುಳಿದ 10 ಅಂಶಗಳು ನೆನೆಗುದಿಗೆ ಬಿದ್ದಿದೆ. ಈ 10 ಅಂಶಗಳನ್ನೂ ಕೂಡ ತಕ್ಷಣದಿಂದಲೇ ಜಾರಿಗೆ ಬರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಿಎಜಿ ಶಿಫಾರಸ್ಸು ಮಾಡಿದೆ.
Advertisement