ನವದೆಹಲಿ: ವಿವಿಐಪಿ ಹೆಲಿಕಾಪ್ಟರ್ ಹಗರಣ ಹಾಗೂ ಸಾಲದ ದೊರೆ ವಿಜಯ್ ಮಲ್ಯ ಅವರ ವಂಚನೆ ಪ್ರಕರಣ ಸೇರಿದಂತೆ ಕೆಲವು ಹೈಪ್ರೊಪೈಲ್ ಪ್ರಕರಣಗಳ ತನಿಖೆಗಾಗಿ ಸಿಬಿಐ ಗುರುವಾರ ಹೆಚ್ಚುವರಿ ನಿರ್ದೇಶಕರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್ಐಟಿ) ರಚನೆ ಮಾಡಿದೆ.
ಅಧಿಕೃತ ಮೂಲಗಳ ಪ್ರಕಾರ, 1984ರ ಬ್ಯಾಚ್ ನ ಗುಜರಾತ್ ಕೇಡರ್ ನ ಐಪಿಎಸ್ ಅಧಿಕಾರಿ ಹೆಚ್ಚುವರಿ ನಿರ್ದೇಶಕ ರಾಕೇಶ್ ಅಸ್ತನ ಅವರು ಈ ವಿಶೇಷ ತನಿಖಾ ತಂಡದ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ರಾಕೇಶ್ ಅವರು ಈ ಹಿಂದೆ 2002ರ ಗೋದ್ರಾ ಹತ್ಯೆ ಪ್ರಕರಣದ ತನಿಖೆಯ ನೇತೃತ್ವ ವಹಿಸಿಕೊಂಡಿದ್ದರು.
ರಾಕೇಶ್ ನೇತೃತ್ವದ ಎಸ್ಐಟಿ ವಿಜಯ್ ಮಲ್ಯ ಅವರ ಸಾಲ ವಂಚನೆ ಪ್ರಕರಣ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖ ನಾಯಕರ ವಿರುದ್ಧ ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಕಾಪ್ಟರ್ ಹಗರಣದ ತನಿಖೆ ನಡೆಸಲಿದ್ದಾರೆ.
ವಿವಿಐಪಿ ಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ವಾಯುಪಡೆ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ ಸೇರಿದಂತೆ ಇತರೆ ಹಲವರನ್ನು ವಿಚಾರಣೆಗೆ ಒಳಪಡಿಸಿದೆ.
17 ವಿವಿಧ ಬ್ಯಾಂಕುಗಳಲ್ಲಿ 9000 ಕೋಟಿ ಸಾಲ ಪಡೆದಿರುವ ವಿಜಯ್ ಮಲ್ಯ ಈಗ ವಿದೇಶದಲ್ಲಿ ನೆಲೆಸಿದ್ದಾರೆ. ಸಾಲಮರುಪಾವತಿ ಬಗ್ಗೆ ಹಲವು ಬಾರಿ ನೊಟೀಸ್ ಕಳುಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ಅನ್ನು ರದ್ದು ಮಾಡಲಾಗಿದೆ. ಅಲ್ಲದೆ ಮದ್ಯದ ದೊರೆಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವಂತೆ ಜಾರಿ ನಿರ್ದೇಶನಾಲಯ ಇಂಟರ್ ಪೋಲ್ ಗೆ ಮನವಿ ಮಾಡಿದೆ.