ಭಾರತ, ಅಮೆರಿಕ, ಜಪಾನ್ ಜಂಟಿ ಸೇನಾ ಕವಾಯತು; ಚೀನಾ ಗೂಢಚಾರಿಕೆ

ಭಾರತ, ಅಮೆರಿಕ ಮತ್ತು ಜಪಾನ್ ದೇಶಗಳು ಫೆಸಿಫಿಕ್ ಮಹಾಸಾಗರದಲ್ಲಿ ನಡೆಸುತ್ತಿರುವ ಜಂಟಿ ನೌಕಾದಳ ಕವಾಯತಿನ ಮೇಲೆ ಚೀನಾ ಗೂಢಚಾರಿಕೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ...
ಮಲಬಾರ್-2 ಜಂಟೀ ಕವಾಯತು (ಸಂಗ್ರಹ ಚಿತ್ರ)
ಮಲಬಾರ್-2 ಜಂಟೀ ಕವಾಯತು (ಸಂಗ್ರಹ ಚಿತ್ರ)

ಓಕಿನಾವ: ಭಾರತ, ಅಮೆರಿಕ ಮತ್ತು ಜಪಾನ್ ದೇಶಗಳು ಫೆಸಿಫಿಕ್ ಮಹಾಸಾಗರದಲ್ಲಿ ನಡೆಸುತ್ತಿರುವ ಜಂಟಿ ನೌಕಾದಳ ಕವಾಯತಿನ ಮೇಲೆ ಚೀನಾ ಗೂಢಚಾರಿಕೆ ನಡೆಸುತ್ತಿದ್ದು,  "ಮಲಬಾರ್"-2 ಯುದ್ಧ ನೌಕೆಗಳ ಹಿಂದೆಯೇ ತನ್ನ ಗೂಢಚಾರಿಕಾ ದೋಣಿಯನ್ನು ಹಿಂಬಾಲಿಸುವಂತೆ ಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಜಪಾನ್​ನ ಓಕಿನಾವ ದ್ವೀಪದ ಬಳಿ ಅಮೆರಿಕದ ಜಾನ್ ಸಿ ಸ್ಟೆನ್ನಿಸ್ ಎಂಬ ಯುದ್ಧ ವಿಮಾನ ವಾಹಕ ಹಡಗು ಸೇರಿದಂತೆ ಜಪಾನ್ ಮತ್ತು ಭಾರತದ ಒಟ್ಟು 9 ಯುದ್ಧ ನೌಕೆಗಳು 8 ದಿನಗಳ ವಾರ್ಷಿಕ ಕವಾಯತಿನಲ್ಲಿ ಪಾಲ್ಗೊಂಡಿವೆ. ಆದರೆ ಅಮೆರಿಕದ ಯುದ್ಧ ನೌಕೆಯನ್ನು ಚೀನಾದ ದೋಣಿಯೊಂದು ಹಿಂಬಾಲಿಸುತ್ತಿದ್ದು, ಹಡಗಿನ ಚಲನವಲನಗಳ ಮೇಲೆ ನಿಗಾ ಇಟ್ಟಿದೆ ಎಂದು  ಅಧಿಕಾರಿಗಳು ಶಂಕಿಸಿದ್ದಾರೆ.

ಜಪಾನ್ ದಕ್ಷಿಣ ಭಾಗದಲ್ಲಿರುವ ಓಕಿನಾವ ದ್ವೀಪ ಸಮೂಹ ಸೂಕ್ಷ್ಮ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಚೀನಾ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿದೆ. ಆ ಮೂಲಕ ಪಶ್ಚಿಮ ಫೆಸಿಫಿಕ್ ಸಾಗರದಲ್ಲಿ  ಪ್ರಾಬಲ್ಯ ಸ್ಥಾಪಿಸಲು ಚೀನಾ ಹವಣಿಸುತ್ತಿದ್ದು, ಇದೇ ಕಾರಣಕ್ಕಾಗಿ ಈ ದ್ವೀಪಸಮೂಹ ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇನ್ನು ಚೀನಾ ದೇಶದ ಈ ಹವಣಿಕೆಗೆ ಜಪಾನ್ ಪ್ರತಿರೋಧ ಒಡ್ಡಿದ್ದು, ಜಪಾನ್ ಗೆ ಭಾರತ ಮತ್ತು ಅಮೆರಿಕ ದೇಶಗಳು ಸಾಥ್ ನೀಡಿವೆ.

ಚೀನಾ ದೇಶದ ಈ ದುರುದ್ದೇಶ ಪೂರಿತ ನಡೆಯನ್ನು ವಿರೋಧಿಸಲೆಂದೇ ಜಪಾನ್, ಭಾರತ ಮತ್ತು ಅಮೆರಿಕ ದೇಶಗಳು ವಿವಾದಿತ ಓಕಿನಾವ ದ್ವೀಪ ಸಮೂಹದಲ್ಲಿ ಜಂಟಿ ನೌಕಾದಳ ಕವಾಯತು  ನಡೆಸುತ್ತಿವೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಚೀನಾದ ಯುದ್ಧ ನೌಕೆ ಜಪಾನ್ ದ್ವೀಪದ ಬಳಿ ಕಾಣಿಸಿಕೊಂಡಿತ್ತು. ಹಾಗಾಗಿ ಜಪಾನ್ ಈ ದ್ವೀಪಗಳಲ್ಲಿ ರಾಡಾರ್ ಕೇಂದ್ರಗಳನ್ನು ಸ್ಥಾಪಿಸುತ್ತಿದೆ  ಮತ್ತು ಯುದ್ಧ ನೌಕೆಗಳನ್ನು ನಿಯೋಜಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com