ಇಂದಿನಿಂದ ರಾಜ್ಯದಲ್ಲಿ ಇ-ಸಿಗರೇಟ್ ನಿಷೇಧ: ಯುಟಿ ಖಾದರ್

ರಾಜ್ಯದಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಇ-ಸಿಗರೇಟ್ ಮಾರಾಟ, ವಿತರಣೆ ಮತ್ತು ಉತ್ಪಾದನೆಯನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಸಚಿವ ಯುಟಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಇ-ಸಿಗರೇಟ್ ಮಾರಾಟ, ವಿತರಣೆ ಮತ್ತು ಉತ್ಪಾದನೆಯನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಅವರು ಬುಧವಾರ ಅಧಿಕೃತವಾಗಿ ಘೋಷಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಖಾದರ್, ರಾಜ್ಯದಲ್ಲಿ ಇ -ಸಿಗರೇಟ್ ನಿಷೇಧಿಸಲಾಗಿದ್ದು, ನಿಷೇಧದ ನಡುವೆಯೂ ಮಾರಾಟ ಕಂಡುಬಂದಲ್ಲಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಅಲ್ಲದೆ ಆದೇಶವನ್ನು ಉಲ್ಲಂಘಿಸಿ ಆನ್ ಲೈನ್ ಮೂಲಕ ಮಾರಾಟ ಮಾಡಿರುವುದರ ಬಗ್ಗೆ ದೂರು ಬಂದಲ್ಲಿ ವೆಬ್ ಸೈಟ್ ಅನ್ನು ಬ್ಯಾನ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸಾರ್ವಜನಿಕವಾಗಿ ಎಲ್ಲಿಯಾದರು ಇ-ಸಿಗರೇಟ್ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ 104 ನಂಬರಿಗೆ ಕರೆ ಮಾಡಿ ದೂರು ನೀಡುವಂತೆ ಖಾದರ್ ಮಾಹಿತಿ ನೀಡಿದ್ದಾರೆ.
ಈಗಾಗಲೇ ಚಂಡೀಗಢ ಹಾಗೂ ಪಂಜಾಬ್​ನಲ್ಲಿ ಇ-ಸಿಗರೇಟ್ ನಿಷೇಧಿಸಲಾಗಿದೆ. ನಮ್ಮ ರಾಜ್ಯದಲ್ಲೂ ಇ-ಸಿಗರೇಟ್ ನಿಷೇಧ ಮಾಡುವಂತೆ ಆರೊಗ್ಯ ಸಚಿವರು ಸ್ಪಷ್ಟ ಸೂಚನೆ ನೀಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯಂದ ಜಾರಿಗೆ ಬಂದಿರಲಿಲ್ಲ. ಇದೀಗ ಸ್ವತಃ ಆರೋಗ್ಯ ಸಚಿವರೇ ಇದನ್ನು ಪ್ರಕಟಿಸಿ ಅಧಿಕೃತಗೊಳಿಸಿದ್ದಾರೆ.
ಏನಿದು ಇ-ಸಿಗರೇಟ್?
ಸಾಮಾನ್ಯವಾಗಿ ಸಿಗರೇಟ್ ಬಗ್ಗೆ ಎಲ್ಲರಿಗೂ ಗೊತ್ತು... ಆದರೆ ಈಗ ಎಲ್ಲವೂ ಇ-ಮಯವಾಗಿದೆ! ತಂಬಾಕಿನ ಸಿಗರೇಟ್ ಗಿಂತ ಇ-ಸಿಗರೇಟ್ ಭಿನ್ನವಾಗಿರುತ್ತದೆ. ಬ್ಯಾಟರಿ ಚಾಲಿತ ಇ-ಸಿಗರೇಟ್ ನಲ್ಲಿ ತಂಬಾಕು ಇರೋದಿಲ್ಲ. ನಿಕೋಟಿನ್ ಮೊದಲಾದ ರಾಸಾಯನಿಕ ವಸ್ತುಗಳನ್ನು ಒಳಗೊಂಡಿರುವ ದ್ರವದ ಕಾರ್ಟಿಜ್ ಅನ್ನು ಬಿಸಿ ಮಾಡಿ ಅದರಿಂದ ಬರುವ ಹಬೆಯನ್ನು ಉಸಿರಾಡುವ ಮೂಲಕ ಎಲೆಕ್ಟ್ರಾನಿಕ್ ಸಿಗರೇಟ್ ಅನ್ನು ಸೇದಬಹುದಾಗಿದೆ.
2003ರಲ್ಲಿ ಚೀನಾ ಔಷಧ ವ್ಯಾಪಾರಿ ಹೋನ್ ಲಿಕ್ ಎಂಬಾತ ಈ ಆಧುನಿಕ ಇ-ಸಿಗರೇಟ್ ಅನ್ನು ಆವಿಷ್ಕರಿಸಿದ್ದ. ಇ-ಸಿಗರೇಟ್ ಆಪಲ್, ಚೆರ್ರಿ, ಮ್ಯಾಂಗೋ ಹೀಗೆ ವಿವಿಧ ಫ್ಲೇವರ್ ಗಳಲ್ಲಿ ದೊರೆಯುತ್ತದೆ. ಇ-ಸಿಗರೇಟ್ ಅನ್ನು ಜೇಬಲ್ಲಿ ಸುಲಭವಾಗಿ ಇಟ್ಟುಕೊಳ್ಳಬಹುದಾಗಿದೆ. ಇ-ಸಿಗರೇಟ್ ಸಾಧನ 300 ರಿಂದ 3,500 ರುಪಾಯಿಯವರೆಗೂ ದೊರೆಯುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com