
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ 2ನೇ ಅವಧಿಗೂ ಮುಂದುವರೆಯುವುದಿಲ್ಲ ಎಂಬ ಹಾಲಿ ಗವರ್ನರ್ ರಘುರಾಮ್ ರಾಜನ್ ಅವರ ಹೇಳಿಕೆ ಬೆನ್ನಲ್ಲೇ ಮುಂದಿನ ಆರ್ ಬಿಐ ಮುಖ್ಯಸ್ಥರ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದ್ದು, 7 ಮಂದಿ ಆರ್ ಬಿಐ ಗವರ್ನರ್ ಹುದ್ದೆ ರೇಸ್ ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.
ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ ಸರ್ಕಾರದ ಬಳಿ ಪ್ರಸ್ತುತ ಆರ್ಥಿಕ ವಲಯದ 7 ಪ್ರಭಾವಿಗಳ ಹೆಸರುಗಳು ಶಿಫಾರಸ್ಸಿನಲ್ಲಿದ್ದು, ಈ ಏಳು ಮಂದಿಯ ಪೈಕಿ ಓರ್ವರನ್ನು ರಿಸರ್ವ್ ಬ್ಯಾಂಕ್ ಮುಖ್ಯಸ್ಥರನ್ನಾಗಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಮುಂದಿನ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಗೆ ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಪಟ್ಟಿಯಲ್ಲಿ 7 ಮಂದಿ ಪ್ರಭಾವಿಗಳ ಹೆಸರುಗಳು ಕೇಳಿಬರುತ್ತಿವೆ.
ಈ ಪೈಕಿ ಎಸ್ ಬಿಐ ನಿರ್ವಾಹಕ ನಿರ್ದೇಶಕಿ ಅರುಂಧತಿ ಭಟ್ಟಾಚಾರ್ಯ, ಖ್ಯಾತ ಆರ್ಥಿಕ ತಜ್ಞ ಮತ್ತು ಜನವಾಣಿ ಸಂಸ್ಥೆಯ ನಿರ್ದೇಶಕ, ಫೋರಮ್ ಆಫ್ ಫೆಡರೇಷನ್ ಸಂಸ್ಥೆಯ ಚೇರ್ಮನ್ ವಿಜಯ್ ಎಲ್ ಕೇಲ್ಕರ್ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಉಳಿದಂತೆ ಆರ್ ಬಿಐ ಮಾಜಿ ಗವರ್ನರ್ ರಾಕೇಶ್ ಮೋಹನ್, ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅಶೋಕ್ ಲಾಹಿರಿ, ಆರ್ ಬಿಐ ಡೆಪ್ಯೂಟಿ ಗವರ್ನರ್ ಉರ್ಜಿತ್ ಪಟೇಲ್, ಖ್ಯಾತ ಆರ್ಥಿಕ ತಜ್ಞ ಮತ್ತು ಹಾಲಿ ಆರ್ ಬಿಐ ಡೆಪ್ಯೂಟಿ ಗವರ್ನರ್ ಸುಬೀರ್ ಗೋಕರ್ಣ ಮತ್ತು ಸೆಬಿ ನೂತನ ಅಧ್ಯಕ್ಷ ಅಶೋಕ್ ಚಾವ್ಲಾ ಅವರ ಹೆಸರುಗಳು ಕೂಡ ಪಟ್ಟಿಯಲ್ಲಿದೆ.
ಇದಲ್ಲದೆ ಕೇಂದ್ರ ವಿತ್ತ ಸಚಿವಾಲಯದ ಇಬ್ಬರು ನುರಿತ ಅಧಿಕಾರಿಗಳಾದ ಶಕ್ತಿಕಾಂತ ದಾಸ್ ಮತ್ತು ಅರವಿಂದ್ ಸುಬ್ರಮಣಿಯನ್ ಅವರ ಹೆಸರುಗಳು ಕೂಡ ಆರ್ ಬಿಐ ಗವರ್ನರ್ ಹುದ್ದೆ ರೇಸ್ ನಲ್ಲಿ ಕೇಳಿಬರುತ್ತಿದೆ ಎಂದು ತಿಳಿದುಬಂದಿದೆ. ಇದೇ ಸೆಪ್ಟೆಂಬರ್ ನಲ್ಲಿ ಹಾಲಿ ಆರ್ ಬಿಐ ಅಧ್ಯಕ್ಷ ರಘುರಾಮ್ ರಾಜನ್ ಅವರ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿದ್ದು, ನೂತನ ಗವರ್ನರ್ ಆಯ್ಕೆಗೆ ಕೇಂದ್ರ ಸರ್ಕಾರ ಈಗಾಗಲೇ ಸಿದ್ಧತೆ ಆರಂಭಿಸಿದೆ. ಅಂತೆಯೇ ಆರ್ ಬಿಐ ಗವರ್ನರ್ ಹುದ್ದೆ ರೇಸ್ ನಲ್ಲಿನ ಸದಸ್ಯರ ಸಂಖ್ಯೆ ಕೂಡ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
Advertisement