
ಬೆಂಗಳೂರು: ನಗರದಲ್ಲಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಸಾವನ್ನಪ್ಪಿ, ತನ್ನ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ ಹರೀಶ್ ನೆನೆಪಿಗಾಗಿ ಸರ್ಕಾರ ಇದೀಗ ಹೊಸ ಯೋಜನೆಯೊಂದನ್ನು ಜಾರಿಗೆ ತರಲು ನಿರ್ಧರಿಸಿದ್ದು, ಯೋಜನೆಗೆ ಹರೀಶ್ ಹೆಸರಿಡುವುದಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಶನಿವಾರ ಹೇಳಿದ್ದಾರೆ.
ಈ ಕುರಿತಂತೆ ವಿಕಾಸಸೌಧದಲ್ಲಿ ಮಾತನಾಡಿರುವ ಯು.ಟಿ. ಖಾದರ್ ಅವರು, ಅಪಘಾತದಲ್ಲಿ ಗಾಯಗೊಳ್ಳುವವರಿಗೆ ಕ್ಷಿಪ್ರ ವೈದ್ಯಕೀಯ ನೆರವು ಸಿಗುವ ಉದ್ದೇಶದಿಂದ 'ಮುಖ್ಯಮಂತ್ರಿ ಸಾಂತ್ವನ' ಯೋಜನೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದ್ದು, ಮುಖ್ಯಮಂತ್ರಿ ಸಾಂತ್ವನ ಯೋಜನೆಗೆ ಹರೀಶ್ ಹೆಸರಿಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಅಪಘಾತಕ್ಕೀಡಾದ ವ್ಯಕ್ತಿಗೆ 48 ಗಂಟೆ ಅವಧಿಗೆ ಗರಿಷ್ಠ ರು. 25 ಸಾವಿರ ವರೆಗಿನ ಚಿಕಿತ್ಸೆಯನ್ನು ಮಾನವೀಯ ನೆಲೆಯಲ್ಲಿ ಒದಗಿಸುವ ಮುಖ್ಯಮಂತ್ರಿ ಸಾಂತ್ವನ ಯೋಜನೆಗೆ ರು. 72 ಕೋಟಿ ಗಳಿಗೆ ಸಂಚಿವ ಸಂಪುಟ ಒಪ್ಪಿಗೆ ನೀಡಿದೆ. ಇದೀಗ ಯೋಜನೆಗೆ ರು.10 ಕೋಟಿ ಈಗಾಗಲೇ ಬಿಡುಗಡೆಯಾಗಿದ್ದು. ಯೋಜನೆಗೆ ಮೂರು ಹಂತದಲ್ಲಿ ಆಸ್ಪತ್ರೆಗಳ ನೋಂದಣಿಯನ್ನು ಮಾಡಿಕೊಳ್ಳಲಾಗುತ್ತದೆ. ಹರೀಶ್ ದಿಟ್ಟತನಕ್ಕೆ ಆರೋಗ್ಯ ಇಲಾಖೆ ಈ ಮೂಲಕ ಕೊಡುಗೆಯನ್ನು ನೀಡುತ್ತಿದೆ ಎಂದು ಹೇಳಿದ್ದಾರೆ.
ಫೆ.16 ರಂದು ನೆಲಮಂಗಲದ ಬೇಗೂರ್ ಗೇಟ್ ಬಳಿ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತವೊಂದು ಸಂಭವಿಸಿತ್ತು. ಅಪಘಾತದಲ್ಲಿ ಬೈಕ್ ಸವಾರ ಹರೀಶ್ ಎಂಬ ಯುವಕನ ದೇಹ ಎರಡು ಭಾಗವಾಗಿ ರಸ್ತೆಯಲ್ಲಿ ಬಿದ್ದಿತ್ತು. ದೇಹ ಎರಡು ತುಂಡಾದರೂ ಎರಡೂ ಕೈಯನ್ನು ಬಡಿಯುತ್ತ ಜೀವ ಉಳಿಸಿ ಎಂದು ಕೂಗಿಕೊಂಡು ತನ್ನ ಅಂಗಾಂಗ ದಾನ ಮಾಡಲು ಸಹಾಯ ಮಾಡುವಂತೆ ಅಂಗಾಲಾಚುತ್ತಿರು ಹೃದಯವಿದ್ರಾವಕ ಘಟನೆ ನಡೆದಿತ್ತು. ಯುವಕನ ಕೊನೆಯಾಸೆಯಂತೆಯೇ ಆತನ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನ್ನಲ್ಲೂ ಸಾರ್ಥಕತೆಯನ್ನು ಮೆರೆದಿದ್ದ.
Advertisement