
ನವದೆಹಲಿ: ಮೂಲಸೌಕರ್ಯ ಕ್ಷೇತ್ರದಲ್ಲಿ ಹಠಾತ್ ಪ್ರಗತಿ ಸಾಧಿಸಲು ದೇಶ ಸನ್ನದ್ಧವಾಗಿದೆ. ಹೆದ್ದಾರಿಗಳು ಮಾತ್ರವೇ ಅಲ್ಲದೆ ಐ-ವೇ (ಇಂಟರ್ನೆಟ್ ವೇ) ರೈಲ್ವೇ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೆಹಲಿಯಲ್ಲಿ ಮಹತ್ವಾಕಾಂಕ್ಷೆಯ ಸೇತುಭಾರತಂ ಯೋಜನೆಗೆ ಚಾಲನೆ ನೀಡಿದ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, "ಮೂಲಸೌಕರ್ಯ ಕ್ಷೇತ್ರದಲ್ಲಿ ಹಠಾತ್ ಪ್ರಗತಿ ಸಾಧಿಸಲು ಭಾರತ ದೇಶ ಸನ್ನದ್ಧವಾಗಿದೆ. ಹೆದ್ದಾರಿಗಳು ಮಾತ್ರವೇ ಅಲ್ಲದೆ ಐ-ವೇ (ಇಂಟರ್ನೆಟ್ ವೇ) ರೈಲ್ವೇ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಲು ಪ್ರೋತ್ಸಾಹ ನೀಡಲಾಗುತ್ತಿದೆ. ಮೂಲಸೌಕರ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಯೋಜನೆಗಳಿಗೂ ವೇಗ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಮತ್ತು ಹೆದ್ದಾರಿಗಳಲ್ಲಿ ಪ್ರತಿ 20ರಿಂದ 25 ಕಿ.ಮೀ.ಗೆ ಒಂದರಂತೆ ವಿಶ್ರಾಂತಿ ಕೊಠಡಿ ಸೌಲಭ್ಯ ಹಾಗೂ ಹೆದ್ದಾರಿಗಳ ಸಮೀಪ ಗ್ರಾಮೀಣ ಜನರು ತಮ್ಮ ಉತ್ಪನ್ನ ಮಾರಲು ಅವಕಾಶ ಕಲ್ಪಿಸುವ ಯೋಜನೆ ರೂಪಿಸಲು ತಯಾರಿ ನಡೆದಿದೆ ಎಂದು ಹೇಳಿದರು.
"ಮಾನವನ ದೇಹದಲ್ಲಿ ರಕ್ತನಾಳಗಳು ಯಾವ ರೀತಿಯ ಪಾತ್ರವನ್ನು ನಿರ್ವಹಿಸುತ್ತವೋ ಮೂಲ ಸೌಕರ್ಯ ಕೂಡ ಒಂದು ದೇಶದ ಅಭಿವೃದ್ಧಿಯಲ್ಲಿ ಅಂತಹುದೇ ಪಾತ್ರ ಹೊಂದಿದೆ" ಎಂದು ಹೇಳಿದರು. "ಇದೇ ಮೊದಲ ಬಾರಿಗೆ ದೇಶದಲ್ಲಿ ಸೇತುವೆಗಳ ನಕ್ಷೆ ತಯಾರಿಸಲಾಗುತ್ತಿದೆ. ದೇಶದಲ್ಲಿ 1.50 ಲಕ್ಷ ಸೇತುವೆಗಳಿದ್ದು, ಅವನ್ನೆಲ್ಲಾ ನಕ್ಷೆ ವ್ಯಾಪ್ತಿಗೆ ತರಲು ಭಾರತೀಯ ಸೇತುವೆ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. ಏಕೆಂದರೆ, ಯಾವ ಸೇತುವೆ ಎಲ್ಲಿದೆ ಎಂದು ಯಾರೊಬ್ಬರಿಗೂ ಗೊತ್ತಿಲ್ಲ. ಇನ್ನು ಅಲ್ಲಿ ಕೆಲಸ ನಡೆಯುತ್ತಿದೆ ಎಂದು ಹೇಗೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯ. ಇದಕ್ಕಾಗಿ ಯಾವುದೇ ಚುನಾಯಿತ ಸರಕಾರ ಅಥವಾ ಯಾವುದೇ ಪ್ರಧಾನಿ ಅಥವಾ ಯಾವುದೇ ಸಚಿವರನ್ನು ನಾನು ದೂಷಿಸುತ್ತಿಲ್ಲ. ಇದು ನಮ್ಮ ವ್ಯವಸ್ಥೆಯ ದೋಷ ಎಂದು ಮೋದಿ ಹೇಳಿದರು.
ಹೆದ್ದಾರಿ ಸಚಿವಾಲಯಗಳು ಹಾಗೂ ರೈಲ್ವೇ ಸಚಿವಾಲಯಗಳ ನಡುವೆ ಹಿಂದಿನ ಸರ್ಕಾರಗಳ ಅವಧಿಯಲ್ಲಿ ರೈಲ್ವೇ ಅಥವಾ ಹೆದ್ದಾರಿ ಸೇತುವೆ ನಿರ್ಮಾಣ ಯೋಜನೆ ಸಂಬಂಧ ಪತ್ರ ವ್ಯವಹಾರ ನಡೆಯುತ್ತಿದ್ದವು. ಅದಕ್ಕೆ ಎಷ್ಟು ಕಾಗದ ಬಳಕೆಯಾಗುತ್ತಿತ್ತೆಂದರೆ, ಆ ಕಾಗದ ಬಳಸಿ ಸೇತುವೆಯ ಸ್ಮಾರಕವನ್ನೇ ನಿರ್ಮಾಣ ಮಾಡಬಹುದಿತ್ತು ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದರು.
Advertisement